ರಾಮನಗರ: "ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿ ಯೋಗೇಶ್ವರ್. ಸಿ.ಎಂ ಹಾಗೂ ಡಿಸಿಎಂ ನಿನ್ನೆ ಹಿಂದೆ ನಿಲ್ಲಿಸಿದ್ದರು. ಇದು ಮುಂದಿನ ದಿನಗಳ ಸೂಚನೆ ಏನೇ ಆದರೂ ಹಿಂದಿನ ಬೆಂಚಿನಲ್ಲೇ ನಿಮಗೆ ಸೀಟು ಎಂಬ ಸಂದೇಶ ರವಾನಿಸಿದ್ದಾರೆ" ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಡಿ.ವಿ. ಸದಾನಂದಗೌಡರು, "ಯೋಗೇಶ್ವರ್ ಆಧುನಿಕ ಭಗೀರಥ ಅಲ್ಲವೇ ಅಲ್ಲ. ಅದು ಬಿಜೆಪಿಯಿಂದ ಆಗಿರುವ ಕೆಲಸವಾಗಿದೆ. ನಾನು ಸಿಎಂ ಆಗಿದ್ದಾಗ ಆರು ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಿರುವುದು. ಯೋಗೇಶ್ವರ್ಗೆ ನಾಚಿಗೆ ಆಗಬೇಕು. ಕಾಂಗ್ರೆಸ್ ಹಗರಣದ ಸರ್ಕಾರ, ಈಗ ಯೋಗೇಶ್ವರ್ ಕೂಡ ಸೇರಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಯಾವುದೇ ಸಂಶಯ ಇಲ್ಲದೆ ಗೆದ್ದೇ ಗೆಲ್ಲುತ್ತಾರೆ. ಗೂಂಡಾ ರಾಜಕಾರಣಕ್ಕೆ ಯೋಗೇಶ್ವರ್ ಕೂಡ ಸೇರಿಕೊಳ್ಳುತ್ತಾರೆ" ಎಂದು ವಾಗ್ದಾಳಿ ನಡೆಸಿದರು.
ನಿಖಿಲ್ ಗೆಲುವಿಗೆ ನಮ್ಮ ಸಂಪೂರ್ಣ ಸಹಕಾರ- ಅಶೋಕ್: ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಮಾತನಾಡಿ, "ನಿಖಿಲ್ ಗೆಲುವಿಗೆ ನಮ್ಮ ಸಂಪೂರ್ಣ ಸಹಕಾರವಿದೆ. ನರೇಂದ್ರ ಮೋದಿ ಹಾಗೂ ದೇವೇಗೌಡರ ಆಶೀರ್ವಾದಿಂದ ಎನ್.ಡಿ.ಎ ಅಭ್ಯರ್ಥಿ ಇವತ್ತು ನಾಮಪತ್ರ ಸಲ್ಲಿಸಲಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಚನ್ನಪಟ್ಟಣ ಲೀಡ್ ಕೊಟ್ಟಿದೆ. ಬಿಜೆಪಿ ಹಾಗೂ ಜೆಡಿಎಸ್ ಚಿಹ್ನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಆಯ್ಕೆ ಮಾಡಿದ್ದಾರೆ. ಸಿಪಿವೈಗೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರ ಸಾಥ್ ಕೊಟ್ಟಿದ್ದಾರೆ. ಆದರೆ, ಕಾರ್ಯಕರ್ತರು ರೆಬೆಲ್ ಆಗಿದ್ದಾರೆ. ಕಾಂಗ್ರೆಸ್ ಮುಡಾ ಹಗರಣದಲ್ಲಿ ನೂರಾರು ಸೈಟುಗಳು ಹಂಚಿಕೆಯಾಗಿದೆ. ವಾಲ್ಮೀಕಿ ನಿಗಮದಲ್ಲೂ ಸಾವಿರಾರು ಕೋಟಿ ಹಣ ಲೂಟಿ ಮಾಡಿದೆ".
"ಹರಕೆಯ ಕುರಿ ಎಂಬ ರೀತಿಯಲ್ಲಿ ಯೋಗೇಶ್ವರ್ ಸ್ಥಿತಿ ಆಗಿದೆ. ಚನ್ನಪಟ್ಟಣದಲ್ಲಿ ಈ ಚುನಾವಣೆ ಒಳ್ಳೆ ಫೈಟ್ ಇದೆ, ಒಂದು ರೂಪಾಯಿ ಅಭಿವೃದ್ದಿ ಮಾಡಿಲ್ಲ. ನಾವು ಕೊಟ್ಟ ಹಣದಲ್ಲೇ ಈಗಲೂ ಚನ್ನಪಟ್ಟಣ ಅಭಿವೃದ್ಧಿ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಸಹ ಪ್ರಚಾರಕ್ಕೆ ಬಂದು ಸಂಪೂರ್ಣವಾಗಿ ಬೆಂಬಲ ಕೊಡುತ್ತೇವೆ. ಈ ಬಾರಿ ನಮ್ಮ ಅಭ್ಯರ್ಥಿಯನ್ನ ಗೆದ್ದೇ ಗೆಲ್ಲಿಸುತ್ತೇವೆ" ಎಂದರು.
ನಿಖಿಲ್ ಜೆಡಿಎಸ್ ಅಭ್ಯರ್ಥಿ ಅಲ್ಲ ಎನ್ಡಿಎ ಅಭ್ಯರ್ಥಿ: "ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಣದಲ್ಲಿರೋದು ಎನ್.ಡಿ.ಎ ಅಭ್ಯರ್ಥಿ. ಅದು ಕೇವಲ ಜೆ.ಡಿ.ಎಸ್ ಅಭ್ಯರ್ಥಿಯಲ್ಲ. ನಮ್ಮ ಸರ್ಕಾರ ಇದ್ದಾಗ ಬೇರೆ ಪಕ್ಷಕ್ಕಿಂತ ನಾವು ಹೆಚ್ಚಿಗೆ ಕೆಲಸ ಮಾಡಿದ್ದೇವೆ. ರಾಮನಗರದಲ್ಲಿ ಕಾವೇರಿ ನದಿ ನೀರು ಮನೆ ಮನೆಗೆ ಕೊಡುತ್ತಿದ್ದೇವೆ. ಜಿಲ್ಲೆಯಲ್ಲಿ ನೂರಾರು ಕೆಲಸಗಳನ್ನು ಮಾಡಿದ್ದೇವೆ. ಜನ ಪ್ರಬುದ್ದರಿದ್ದಾರೆ, ಜನ ಎನ್.ಡಿ.ಎ ಅಭ್ಯರ್ಥಿ ಕೈ ಹಿಡಿಯುತ್ತಾರೆ. ಕಾಂಗ್ರೆಸ್ ಪಕ್ಷ ಜನ ವಿರೋಧಿ ಹಾಗೂ ರೈತ ವಿರೋಧಿ ಎಂಬ ಖ್ಯಾತ ನಾಮಗಳಿದೆ. ಡಿಕೆ ಶಿವಕುಮಾರ್ ಜಿಲ್ಲೆ ಬಿಟ್ಟು ಬೆಂಗಳೂರಿಗೆ ಹೋಗಿ ಉಸ್ತುವಾರಿ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ಗೆ ಯಾವ ಕಾರಣಕ್ಕೂ ಬೆಂಬಲ ಕೊಡುವುದಿಲ್ಲ. ಯೋಗೇಶ್ವರ್ ನಡೆಯಿಂದ ಬಿಜೆಪಿ ಹಿನ್ನೆಡೆಯಾಗಿದೆ ಆದರೂ ಬಲವಾಗಿ ಕಟ್ಟಲು ತಯಾರಿದ್ದೇವೆ" ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ್ ರಾಮನಗರದಲ್ಲಿ ತಿಳಿಸಿದರು.
ಇದನ್ನೂ ಓದಿ: ಕೋಟಿ ಒಡೆಯರಾದರೂ ಸಾಲಗಾರರು, ಅಫಿಡವಿಟ್‌ನಲ್ಲಿ ಬಹಿರಂಗ; ಸಂಡೂರಿನ ಕೈ ಅಭ್ಯರ್ಥಿಗಿಂತ ಕಮಲ ಅಭ್ಯರ್ಥಿ ಅತ್ಯಧಿಕ ಶ್ರೀಮಂತ!