ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ವೈದ್ಯಕೀಯ ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಯಲಿರುವ ಶಿವಾಜಿ ನಗರದ ಬೌರಿಂಗ್ & ಲೇಡಿ ಕರ್ಜನ್ ಆಸ್ಪತ್ರೆಯ ಬಳಿ ಪೊಲೀಸರು ಭದ್ರತೆ ವಹಿಸಿದ್ದಾರೆ. ಈಗಾಗಲೇ ಆರೋಪಿಯನ್ನು ಪೊಲೀಸರು ತಪಾಸಣೆಗೆ ಕರೆದೊಯ್ದಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಆಸ್ಪತ್ರೆ ಬಳಿ ಇಬ್ಬರು ಇನ್ಸ್‌ಪೆಕ್ಟರ್ಸ್, ಸಬ್ ಇನ್ಸ್‌ಪೆಕ್ಟರ್ಸ್, ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಎಸ್ಐಟಿ ತನಿಖೆಯ ಮುಂದಿನ ಪ್ರಕ್ರಿಯೆಗಳು: ವೈದ್ಯಕೀಯ ತಪಾಸಣೆಯ ನಂತರ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಎಸ್ಐಟಿ, ಅವರನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಲಿದೆ. ಪ್ರಜ್ವಲ್ ಪ್ರಕರಣದ ಪ್ರಮುಖ ಆರೋಪಿಯಾಗಿರುವುದರಿಂದ ಅವರನ್ನು ತೀವ್ರ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ. ಮೊದಲಿಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತನಿಖಾಧಿಕಾರಿಗಳು ವಿಡಿಯೋ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಈಗಾಗಲೇ ಮೊಬೈಲ್ ಸೇರಿದಂತೆ ಕೆಲವು ವಸ್ತುಗಳನ್ನು ಎಸ್ಐಟಿ ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಅಲ್ಲದೇ ವಿದೇಶಕ್ಕೆ ತೆರಳಿದ್ದಾಗಿನಿಂದ ಇಲ್ಲಿಯವರೆಗೂ ನೆರವು ನೀಡಿರುವವರ ಮಾಹಿತಿಯನ್ನೂ ಎಸ್ಐಟಿ ಕಲೆಹಾಕಲಿದೆ. ನಂತರ ಸಂತ್ರಸ್ತೆಯರ ದೂರಿನಲ್ಲಿ ತಿಳಿಸಿರುವಂತೆ ದೌರ್ಜನ್ಯ ನಡೆದಿದೆ ಎನ್ನಲಾದ ಸ್ಥಳಗಳಲ್ಲಿ ಮಹಜರು ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್, ವಿಮಾನ ನಿಲ್ದಾಣದಲ್ಲಿ ಬಂಧಿಸಿದ SIT - SIT Arrests Prajwal Revanna