ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಏನೇ ಆರೋಪವಿದ್ದರೂ, ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಅವರು ಗೆಲ್ಲುತ್ತಾರೆ. ನಮ್ಮ ಕುಟುಂಬದ ಏಳಿಗೆ ಸಹಿಸದ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂದು ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.
ಹಾಸನದಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಪಜ್ವಲ್ ಬಗ್ಗೆ ಮಾತಾಡಲ್ಲ. ಸರ್ಕಾರ ರಚಿಸಿರುವ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ಇದೊಂದು ಷಡ್ಯಂತ್ರ ಅಂತ ಹೇಳಬಲ್ಲೆ. ದಶಕಗಳಿಂದ ಹೆಚ್.ಡಿ.ರೇವಣ್ಣನವರು ಈ ಭಾಗದ ಅತ್ಯಂತ ಜನಪ್ರಿಯ ನಾಯಕರು. ಅದನ್ನು ಸಹಿಸದ ಜನ ಇಂಥದನ್ನೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ನಾಡಿನ ಜನರಿಗೆ ಗೊತ್ತಾಗಲಿದೆ. ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಎಂದಿನಂತೆ ಕಾರ್ಯಕರ್ತರ ಸಭೆ ನಡೆಯುತ್ತಿವೆ. ಚುನಾವಣೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಯಾಗುತ್ತದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ ಎನ್ನಲಾದ ವಿಚಾರದ ಪ್ರಕ್ರಿಯಿಸಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಾನು ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ನಿಜ. ಅದರೆ, ಅದು ಜನವರಿ ತಿಂಗಳಲ್ಲಿ. ನಾನು ಜಿಲ್ಲೆಯ ಪ್ರತಿನಿಧಿ. ಕಳೆದ ಒಂದೂವರೆ ತಿಂಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರಿಂದ ಬೆಂಗಳೂರಿಗೆ ಹೋಗಲು ಕೂಡ ಸಾಧ್ಯವಾಗಿಲ್ಲ. ಡಿ.ಕೆ.ಶಿವಕುಮಾರ್ ಅಥವಾ ಬೇರೆ ನಾಯಕರನ್ನು ಭೇಟಿ ಮಾಡುವ ಸಂದರ್ಭ ಎಲ್ಲಿ ಬರುತ್ತದೆ?. ಈ ಹಿಂದೆಯೂ ರೇವಣ್ಣನವರು ಕುಟುಂಬ ಕಾಂಗ್ರೆಸ್ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತದೆ ಎಂದು ಸೃಷ್ಟಿ ಮಾಡಿದ್ದೀರಿ. ಈ ಊಹಾಪೋಹಗಳನ್ನು ಬಿಟ್ಟುಬಿಡಿ ಎಂದು ಹೇಳಿದರು.
ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಎಸ್ಐಟಿಗೆ ಕೋರ್ಟ್ ನೋಟಿಸ್