ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ವಿಚಾರವಾಗಿ ಜೆಡಿಎಸ್ ರಾಜಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಹಿರಿಯ ನಾಯಕ ಜಿ.ಟಿ.ದೇವೇಗೌಡ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರೆ, ಪ್ರಜ್ವಲ್ ಹೋದ ದಿನದಿಂದ ಯಾರ ಸಂಪರ್ಕಕ್ಕೂ ಬಂದಿಲ್ಲ ಎಂದು ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾಗಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಈಗ ನನಗೆ ಸಿಗುತ್ತಾರೆಯೇ ಎಂದು ಮರು ಪ್ರಶ್ನಿಸಿದರು. ಅಲ್ಲದೇ, ಈ ಪ್ರಕರಣ ಆಗುವ ಹಿಂದೆಯೂ ನನ್ನ ಜೊತೆ ಇಲ್ಲ. ಇನ್ನೂ ವಿದೇಶಕ್ಕೆ ಹೋದ ಮೇಲೆ ನನ್ನ ಸಂಪರ್ಕಕ್ಕೆ ಸಿಗಲು ಸಾಧ್ಯವೇ?. ಅವರ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಹೇಳಿದರು.
ಮತ್ತೊಂದೆಡೆ, ಜಿ.ಟಿ.ದೇವೇಗೌಡ ಮಾತನಾಡಿ, ಪ್ರಜ್ವಲ್ ರೇವಣ್ಣ ವಿಚಾರ ನನಾಗಲಿ ಅಥವಾ ಅವರ ಕುಟುಂಬದವರಿಗಾಗಲಿ ತಿಳಿದಿಲ್ಲ. ಅವರು ಎಲ್ಲಿ ಇದ್ದಾರೆ ಎಂಬುವುದೂ ಗೊತ್ತಿಲ್ಲ. ಅವರು ಹೋದ ದಿನದಿಂದ ಮತ್ತು ಈ ಘಟನೆ ನಡೆದ ದಿನದಿಂದ ಕುಟುಂಬದವರು ಮತ್ತು ನಮ್ಮ ರಾಜಕಾರಣಿಗಳ ಜೊತೆಗೂ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.
ಪ್ರಜ್ವಲ್ ಎಲ್ಲಿ ಇದ್ದಾರೆ ಎಂಬುದು ನನಗೆ ಹಾಗೂ ಅವರ ಕುಟುಂಬದವರಿಗೂ ಗೊತ್ತಿಲ್ಲ. 196 ದೇಶಗಳಿಗೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆ ಮೂಲಕ ಅವರು ಸಿಗಬಹುದು ಹೊರತು, ಅದನ್ನು ಬಿಟ್ಟು ಅವರ ಬಗ್ಗೆ ನಮಗೆ ಮತ್ತು ಅವರ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.
ಸರ್ಕಾರ ಎಸ್ಐಟಿಯಿಂದ ತನಿಖೆ ಮಾಡಿಸುತ್ತಿದೆ. ಸತ್ಯಾಂಶ ಹೊರ ಬರಬೇಕಿದೆ. ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಕೊಡುವುದಿಲ್ಲ ಮತ್ತು ಅಧಿಕಾರಿಗಳ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದಾರೆ. ಪೆನ್ ಡ್ರೈವ್ ತಯಾರು ಮಾಡಿದವರು, ವಿತರಣೆ ಮಾಡಿದವರನ್ನೂ ಕಂಡು ಹಿಡಿಯುತ್ತಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂಬ ವಿಚಾರವನ್ನೂ ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಪ್ರಜ್ವಲ್ ಪರವಲ್ಲ, ರೇವಣ್ಣ ಪರ ಪ್ರತಿಭಟನೆ: ಜೆಡಿಎಸ್ ಪ್ರತಿಭಟನೆ ಮಾಡಿದ್ದು, ಹೆಚ್.ಡಿ.ರೇವಣ್ಣ ಪರವಾಗಿ. ರೇವಣ್ಣ ಅವರು ಕಿಡ್ನಾಪ್ ಮಾಡದೇ ಇದ್ದರೂ, ಅವರನ್ನು ಬಂಧಿಸಿದ್ದು ಸರಿಯಲ್ಲ. ಇದು ಸುಳ್ಳು ಪ್ರಕರಣ ಎಂದು ನಾವು ಪ್ರತಿಭಟನೆ ಮಾಡಿರುವುದು ಹೊರತು, ಪ್ರಜ್ವಲ್ ಪರ ಅಲ್ಲ. ಎಸ್ಐಟಿಯವರು ಸರ್ಕಾರ ಹೇಳಿದ್ದಂತೆ ಕೇಳುತ್ತಿದ್ದಾರೆ ಎಂದು ನಾವು ಪ್ರತಿಭಟಿಸಿದ್ದು ಎಂದು ಇದೇ ವೇಳೆ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.
ಕೆ.ಟಿ.ಶ್ರೀಕಂಠೇಗೌಡರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಎಂಎಲ್ಸಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಕಂಠೇಗೌಡರ ಮನವೊಲಿಸಿದ್ದಾರೆ. ಈ ಬಾರಿ ವಿವೇಕಾನಂದರಿಗೆ ಟಿಕೆಟ್ ನೀಡಲಾಗಿದೆ. ಅವರ ಜೊತೆ ಕೆಲಸ ಮಾಡಿ ಎಂದು ತಿಳಿಸಿದ್ದಾರೆ. ಅಲ್ಲದೇ, ಶ್ರೀಕಂಠೇಗೌಡರ ಮುಂದಾಳ್ವತದಲ್ಲೇ ವಿವೇಕಾನಂದ ಚುನಾವಣೆಯೂ ನಡೆಯುತ್ತದೆ. ಇದರ ಜೊತೆಗೆ ಬಿಜೆಪಿಯಲ್ಲೂ ಸಣ್ಣ ಗೊಂದಲ ಆಗಿತ್ತು. ನಿಂಗರಾಜೇಗೌಡರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಈಗ ಎಲ್ಲವೂ ಗೊಂದಲ ಬಗ್ಗೆ ಹರಿದಿದೆ ಎಂದು ಹೇಳಿದರು.
ಇದನ್ನೂ ಓದಿ: ಎಸ್ಐಟಿಯನ್ನ ಕಾಣದ ಕೈ ನಿಯಂತ್ರಿಸುತ್ತಿದೆ, ತಿಮಿಂಗಲ ಯಾರು ಎನ್ನುವುದು ಪರಮೇಶ್ವರ್ಗೆ ಗೊತ್ತು: ಕುಮಾರಸ್ವಾಮಿ ಟಾಂಗ್