ದೆಹಲಿ/ಹುಬ್ಬಳ್ಳಿ: ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಪ್ರಲ್ಹಾದ್ ಜೋಶಿ ಅವರಿಗೂ ಸಂಪುಟ ದರ್ಜೆಯ ಸ್ಥಾನ ಸಿಗುವುದು ಖಚಿತವಾಗಿದೆ. ಅಂತೆಯೇ ಜೋಶಿ ಅವರು ಇಂದು ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಎನ್ಡಿಎ ಮೈತ್ರಿ ಕೂಟದಿಂದ ಸತತ ಮೂರನೇ ಬಾರಿ ಸರ್ಕಾರ ರಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪ್ರಲ್ಹಾದ್ ಜೋಶಿ ಅವರು ಇಂದು ಸಂಜೆ 7:15ಕ್ಕೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿ ಅವರ ಎರಡನೇ ಅವಧಿಯಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದ್ದ ಜೋಶಿ ಅವರಿಗೆ ಈಗ ಮತ್ತೆ ಕೇಂದ್ರ ಕ್ಯಾಬಿನೆಟ್ನಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಸಿಹಿ ತಿನ್ನಿಸಿ ಬೆನ್ನುತಟ್ಟಿದ ಬಿಎಸ್ವೈ: ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದಾರೆ. ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಎಸ್ವೈ ಅವರನ್ನು ಭೇಟಿಯಾಗಿ ಜೋಶಿ ಆಶೀರ್ವಾದ ಪಡೆದರು. ಈ ವೇಳೆ ಜೋಶಿ ಅವರಿಗೆ ಯಡಿಯೂರಪ್ಪ ಅವರು ಸಿಹಿ ತಿನ್ನಿಸಿ ಬೆನ್ನು ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.
ಸಂಸದರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹರೀಶ್ ಪೂಂಜಾ, ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಗಡಿ ಜಿಲ್ಲೆಯ ಮಹಿಳೆಗೆ ಆಹ್ವಾನ - Modi Oath Taking Ceremony
ಮೋದಿ-ಜೋಶಿ ದಾಖಲೆ: ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ, ಇತ್ತ ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಅವರದ್ದು ಒಂದು ದಾಖಲೆ ಆಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಗೆಲುವು ಸಾಧಿಸಿ ಮತ್ತೆ ಕೇಂದ್ರ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.
ಪ್ರಲ್ಹಾದ್ ಜೋಶಿ ಅವರು ಮತ್ತೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದವರಲ್ಲಿ, ಬೆಂಬಲಿಗರಲ್ಲಿ ಮತ್ತು ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ: ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET