ದಾವಣಗೆರೆ: ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಅಧಿಕಾರಿಗೆ ಇಲ್ಲಿಯ ನ್ಯಾಯಾಲಯ ಗುರುವಾರ ದಂಡಸಹಿತ ಜೈಲು ಶಿಕ್ಷೆ ವಿಧಿಸಿದೆ. 1,08,500 ರೂಪಾಯಿ ವಂಚಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ಅಪರಾಧಿಗೆ ಕೋರ್ಟ್, 1 ವರ್ಷ 6 ತಿಂಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
ಚಿರಡೋಣಿ ಅಂಚೆಪಾಲಕ ಶ್ರೀಕಾಂತ್ ಕೆ.ಆರ್ ಶಿಕ್ಷೆಗೆೊಳಗಾದ ಅಧಿಕಾರಿ. ಸೆ.24, 2018ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಶ್ರೀಕಾಂತ್ ಸಾರ್ವಜನಿಕರ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಶಿವಮೊಗ್ಗ ಪೂರ್ವ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಗಣೇಶ ಬಸವಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚಿರಡೋಣಿ ಅಂಚೆಪಾಲಕ ಶ್ರೀಕಾಂತ್ ಕೆ.ಆರ್ ಅವರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಒಟ್ಟು 1,08,500 ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ತನಿಖಾಧಿಕಾರಿ ಕಿಲೋವತಿ, ಶ್ರೀಕಾಂತ ವಂಚಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ ಆರೋಪ ಸಾಬೀತಾಗಿದ್ದರಿಂದ ಚನ್ನಗಿರಿಯ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗಯ್ಯ ಬಿ.ಗಂಗಾಧರಮಠ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮಂಜವ್ವ ದಾಸರ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ₹3,200 ಕೋಟಿ ತೆರಿಗೆ ವಂಚನೆ! 9 ನಕಲಿ ಕಂಪೆನಿಗಳು ಷೇರುಪೇಟೆಯಲ್ಲೂ ನೋಂದಣಿ; ಇಬ್ಬರು ಮಾಸ್ಟರ್‌ಮೈಂಡ್ಸ್ ಸೆರೆ