ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮತ್ತಷ್ಟು ಚುರುಕಾಗಿದ್ದು, ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಮುನ್ನೆಚ್ಚರಿಕೆ ನೀಡಿದೆ.
ಯೆಲ್ಲೋ ಅಲರ್ಟ್ ನೀಡಲಾದ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗದ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಹೆಚ್ಚು ಮಳೆಯಾಗಲಿದೆ. ಉಳಿದಂತೆ ದಕ್ಷಿಣ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ, ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರಲ್ಲಿ ಮೋಡ ಕವಿಡ ವಾತಾವರಣ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಾಧಾರಣ ಮಳೆ ಅಥವಾ ಗುಡುಗುಸಹಿತ ಮಳೆ ಕೆಲವೊಮ್ಮೆ ತುಂಬಾ ಜೋರಾಗಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿಗ್ರಿ ದಾಖಲಾಗಲಿದೆ ಎಂದು ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಭಾರಿ ಮಳೆ?: ನಿನ್ನೆಯಿಂದ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು 9 ಸೆ.ಮೀ ಮಳೆ ಸುರಿದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿನಲ್ಲಿ 8 ಸೆ.ಮೀ, ಹುಬ್ಬಳ್ಳಿ, ಬೆಳಗಾವಿಯಲ್ಲಿ 7 ಸೆ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
"ಲಕ್ಷದ್ವೀಪ ಮತ್ತು ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದೆ. ಇದರ ಎತ್ತರ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀನಲ್ಲಿದೆ. ಕರ್ನಾಟಕ-ಗೋವಾ ಕರಾವಳಿಯ ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲೆ, ಕೇರಳ ಮತ್ತು ತಮಿಳುನಾಡಿನಾದ್ಯಂತ ನೈಋತ್ಯ ಬಂಗಾಳ ಕೊಲ್ಲಿಯವರೆಗೆ ಟ್ರಫ್ ನಿರ್ಮಾಣವಾಗಲಿದೆ. ಇದು 4.5 ಕಿ.ಮೀ ಎತ್ತರದಲ್ಲಿ ನಿರ್ಮಾಣವಾಗಲಿದೆ. ಶ್ರೀಲಂಕಾ ಮತ್ತು ನೆರೆಹೊರೆಯ ಮೇಲೆ ಸೈಕ್ಲೋನಿಕ್ ಪರಿಚಲನೆ ಇದ್ದು, ಮತ್ತೊಂದೆಡೆ ಕೊಮೊರಿನ್ ಪ್ರದೇಶದಿಂದ ಉತ್ತರ ಕೊಂಕಣ ತೀರದವರೆಗೆ ಚಂಡಮಾರುತದ ಪರಿಚಲನೆ ಇರಲಿದೆ. ಈ ಹಿನ್ನೆಲೆಯಲ್ಲಿ ಒಳನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದೆ" ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ; ಬೆಳೆ ನಾಶ, ರೈತರು ಕಂಗಾಲು