ಚಾಮರಾಜನಗರ: ಮತ ಬಹಿಷ್ಕಾರ ಘೋಷಿಸಿದ ಬಳಿಕ ಮತಗಟ್ಟೆಯನ್ನೇ ಧ್ಚಂಸ ಮಾಡಿದ್ದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಘಟನೆಗೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟದ ಪೊಲೀಸರು, 15 ಮಹಿಳೆಯರು ಹಾಗೂ 10 ಪುರುಷರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಂಡಿಗನತ್ತ ಮತಗಟ್ಟೆ ಪಿಆರ್ಒ ಬಸವಣ್ಣ ಹಾಗೂ ಹನೂರು ತಹಶೀಲ್ದಾರ್ ಗುರುಪ್ರಸಾದ್ ಅವರು ಪ್ರತ್ಯೇಕ ದೂರು ನೀಡಿದ್ದರು. ಅಧಿಕಾರಿಗಳು ನೀಡಿದ ದೂರಿನ ಅನ್ವಯ 250 ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಘಟನೆ ಹಿನ್ನೆಲೆ ಇಂಡಿಗನತ್ತ ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿ ಬಿಕೋ ಎನ್ನುತ್ತಿದೆ. ಬಂಧನ ಭೀತಿಯಿಂದ ಮನೆಗಳನ್ನು ತೊರೆದಿರುವ ಜನರು ತಲೆ ಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಎಎಸ್ಪಿ ಉದೇಶ್ ಭೇಟಿ ಕೊಟ್ಟಿದ್ದಾರೆ. ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ: ಇಂಡಿಗನತ್ತ ಗ್ರಾಮದ ಘಟನೆ ಖಂಡಿಸಿ, ಇಂಡಿಗನತ್ತ ಗ್ರಾಮದ ಸಮೀಪ ಇರುವ ಮೆಂದಾರೆ ಗ್ರಾಮದ ಸೋಲಿಗ ಸಮುದಾಯದವರು ಪ್ರತಿಭಟನೆ ನಡೆಸಿದರು.
''ತಾವು ಮತಹಾಕಲು ಬಂದಾಗ ಇಂಡಿಗನತ್ತ ಗ್ರಾಮದ ಕೆಲವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮತದಾನ ಮಾಡಲು ಅಡ್ಡಿಪಡಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೆಂದಾರೆ ಗ್ರಾಮದ ಜನರು ಪ್ರತಿಭಟನೆ ವೇಳೆ ಒತ್ತಾಯಿಸಿದರು.
ಇದನ್ನೂ ಓದಿ: ಚಾಮರಾಜನಗರ: ಇವಿಎಂ ಹೊತ್ತು ಬರುತ್ತಿದ್ದ ವಾಹನ ಅಡ್ಡಹಾಕಿದ ಕಾಡಾನೆ ಹಿಂಡು - ವಿಡಿಯೋ ನೋಡಿ - vehicle blocked by elephant