ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡು ಬಳಿ ನಟೋರಿಯಸ್ ರೌಡಿಶೀಟರ್ ಮುತ್ತುರಾಜ್ ಅಲಿಯಾಸ್ ಡಕ್ಕ ಎಂಬಾತನ ಮೇಲೆ ಹಲಗೂರು ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಕೊಲೆ, ಕೊಲೆ ಯತ್ನ ಹಾಗೂ ರೌಡಿ ಚಟುವಟಿಕೆಗಳು ಸೇರಿದಂತೆ 5ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮುತ್ತುರಾಜ್ ಅಲಿಯಾಸ್ ಡಕ್ಕನನ್ನು ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳ್ಳಂಬೆಳಿಗ್ಗೆ ಅರೆಸ್ಟ್ ಮಾಡಲು ಹೋದಾಗ, ಸಿಬ್ಬಂದಿ ಸಿದ್ದರಾಜು ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಮೊದಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ವಾರ್ನಿಂಗ್ ಮಾಡಲಾಗಿದೆ. ಆದರೂ ಸಹ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಜುಲೈ 31ರಂದು ಕಾಂತರಾಜು ಎಂಬಾತನ ಕೊಲೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿತ್ತು. ಸಿಪಿವೈ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದಾರೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿತ್ತು. ತನಿಖೆ ವೇಳೆ ಕಾಂತರಾಜು ಕೊಲೆಗೆ ಮುತ್ತುರಾಜ್ ಅಲಿಯಾಸ್ ಡಕ್ಕ ಎಂಬಾತನಿಂದ ಸುಪಾರಿ ಸಿಕ್ಕಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು. ಡಕ್ಕ ಅಲಿಯಾಸ್ ಮುತ್ತುರಾಜ್ ಸೂಚನೆ ಮೇಲೆ ಕೊಲೆ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಗೆ ನೀಡಿದ್ದಾರೆ" ಎಂದರು.
"ಹೀಗಾಗಿ, ವಿಚಾರಣೆ ಮುಂದುವರೆಸಿದಾಗ ಡಕ್ಕ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ದೊರಕಿದೆ. ಬೈಕ್ನಲ್ಲಿ ಹೋಗುತ್ತಿದ್ದ ಆರೋಪಿಯನ್ನು ಹಿಡಿಯಲು ಹೋದ ವೇಳೆ ಬೈಕ್ ಬೀಳಿಸಿ, ಆತ ಓಡಲು ಮುಂದಾಗಿದ್ದಾನೆ. ಈ ವೇಳೆ ಹಿಡಿಯಲು ಕಾನ್ಸ್ಟೇಬಲ್ ಮುಂದಾದಾಗ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಏರ್ಫೈರ್ ವಾರ್ನಿಂಗ್ ನೀಡಲಾಗಿದೆ, ಆದರೂ ಬಗ್ಗದ ಕಾರಣ ಆರೋಪಿಯ ಬಲಗಾಲಿಗೆ ತಮ್ಮ ಆತ್ಮರಕ್ಷಣೆಗಾಗಿ ಸಿಪಿವೈ ಶ್ರೀಧರ್ ಗುಂಡೇಟು ನೀಡಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಇದನ್ನೂ ಓದಿ: ಕಾರು ಚಾಲಕನ ಮುಖಕ್ಕೆ ಉಗಿದ ಆಟೋ ಚಾಲಕನ ಬಂಧನ! - Auto Driver Arrest