ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡು ಹೊಡೆದ ಘಟನೆ ನಗರದ ಎಂಟಿಎಸ್ ಕಾಲೋನಿಯಲ್ಲಿ ನಡೆದಿದೆ.
ಗುಂಡೇಟಿನಿಂದ ಅರುಣ್ ಅಲಿಯಾಸ್ ಸೋನು ರಾಜು ನಾಯಕ್ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸೋನು ನಾಯಕ್ ಹುಬ್ಬಳ್ಳಿಯ ನೇಕಾರ ನಗರ ನಿವಾಸಿಯಾಗಿದ್ದು, ಹಲವು ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳುವ ವೇಳೆ ಉಪಪನಗರ ಠಾಣೆ ಇನ್ಸ್‌ಪೆಕ್ಟರ್ ಎಂ.ಎಸ್.ಹೂಗಾರ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ವೇಳೆ, ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ತರುಣ್ ಗಡ್ಡನವರ್ ಹಾಗೂ ಧೀರು ಪಮ್ಮಾರ್ ಎಂಬವರಿಗೆ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಲಿಗೆಕೋರ ಅರುಣ ಅಲಿಯಾಸ್ ಸೋನು ನಾಯ್ಕ ವಿರುದ್ಧ ಐದು ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿದ್ದವು. ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದ. ವೇಶ್ಯಾವಾಟಿಕೆ ಹೆಸರಲ್ಲಿ ದರೋಡೆ ಪ್ರಕರಣವೊಂದರಲ್ಲಿ ಬಂಧಿಸಿ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತನ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಆರೋಪಿ ಆಟೋ ಚಾಲಕ: ನಗರದಲ್ಲಿಂದು ಪೊಲೀಸ್ ಫೈರಿಂಗ್ನಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯ ಆರೋಗ್ಯ ವಿಚಾರಿಸಿದ ಬಳಿಕ ನಗರ ಪೊಲೀಸ್ ಆಯುಕ್ತರು ಮಾತನಾಡಿದರು. ಆರೋಪಿ ಆಟೋ ಚಾಲಕನಾಗಿದ್ದು, ಪ್ರಯಾಣಿಕರೇ ಇವನ ಟಾರ್ಗೆಟ್ ಆಗಿದ್ದರು. ಪ್ರಯಾಣಿಕರನ್ನು ಹೋಟೆಲ್‌ಗೆ ಕೆರೆದೊಯ್ದು, ಅವರಿಗೆ ಮಹಿಳೆಯರನ್ನು ಸಪ್ಲೈ ಮಾಡುತ್ತಿದ್ದ. ಬಳಿಕ ಕರೆದೊಯ್ದವರನ್ನೇ ಸುಲಿಗೆ ಮಾಡುತಿದ್ದ. ಮೊನ್ನೆಯಷ್ಟೆ ಬಂಧಿತ ಅರುಣ ಮತ್ತು ಗ್ಯಾಂಗ್, ಅಕ್ಕಾ ಸಾಲಿಗನಾಗಿದ್ದ ಪಶ್ಚಿಮ ಬಂಗಾಳ ಮೂಲದ ಪ್ರಣವ್ ಎಂಬುವರನ್ನು ಆಟೋ ರಿಕ್ಷಾದಲ್ಲಿ ಹತ್ತಿಸಿಕೊಂಡು ಹೋಗಿ, ಬೆದರಿಸಿ ಚಿನ್ನಾಭರಣ, 10 ಸಾವಿರ ನಗದು, ಮೊಬೈಲ್ ದೋಚಿದ್ದರು. ಈ ವ್ಯಕ್ತಿ ದಾಖಲಿಸಿದ್ದ ಪ್ರಕರಣದ ಆಧಾರದ ಮೇರೆಗೆ ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆಟೋರಿಕ್ಷಾ, ಬೈಕ್ ಕಳ್ಳತನ ಎರಡು ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿತ್ತು. ಹೆಚ್ಚುವರಿ ತನಿಖೆಗೆಂದು ಎಂಟಿಎಸ್ ಕಾಲೋನಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಉಪನಗರ ಠಾಣೆ ಇನ್ಸ್‌ಪೆಕ್ಟರ್ ಎಂ.ಎಸ್. ಹೂಗಾರ ಆರೋಪಿ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ವ್ಯವಸ್ಥಿತವಾಗಿ ಸುಲಿಗೆ, ದರೋಡೆ ಕೃತ್ಯ ಮಾಡಲಾಗುತ್ತಿತ್ತು. ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ಕೃತ್ಯ ನಡೆಸುತ್ತಿದ್ದ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನಲ್ಲಿ ಮೂವರು ತಪ್ಪಿಸಿಕೊಂಡಿದ್ದಾರೆ. ಅವರ ಬಂಧನಕ್ಕೂ ಜಾಲ ಬೀಸಲಾಗಿದೆ ಎಂದು ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.