ಬೆಂಗಳೂರು: ನಕಲಿ ದಾಖಲೆ ಮತ್ತು ನೋಂದಣಿ ಸಂಖ್ಯೆ ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಬಯಲಿಗೆಳೆದಿರುವ ಸಿಸಿಬಿಯ ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸೈಯ್ಯದ್ ರಿಯಾಜ್ ಹಾಗೂ ಆಸ್ಟಿನ್ ಕಾರ್ಡೋಸ್ ಬಂಧಿತ ಆರೋಪಿಗಳು.
ಅನ್ಯ ರಾಜ್ಯಗಳಲ್ಲಿ ಕದ್ದ ಕಾರುಗಳಿಗೆ ನಕಲಿ ನೋಂದಣಿ ಸಂಖ್ಯೆ, ದಾಖಲೆಗಳನ್ನ ಸೃಷ್ಟಿಸುತ್ತಿದ್ದ ಆರೋಪಿಗಳು ಅವುಗಳನ್ನ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಬ್ಯಾಂಕ್‌ನಲ್ಲಿ ಪಡೆದ ಲೋನ್ ಮರುಪಾವತಿಸಲಾಗದವರಿಂದ ಕಾರುಗಳನ್ನು ಅಡಮಾನವಿರಿಸಿಕೊಳ್ಳುತ್ತಿದ್ದ ಆರೋಪಿಗಳು, ಬಳಿಕ ಲೋನ್ ಮರುಪಾವತಿಯಾಗಿರುವಂತೆ ಎನ್ಓಸಿ ಸಿದ್ಧಪಡಿಸಿ ಅವುಗಳನ್ನು ಇತರರಿಗೆ ಮಾರಾಟ ಮಾಡುತ್ತಿದ್ದರು. ಇನ್ಸ್ಟಾಗ್ರಂ, ಫೇಸ್‌ಬುಕ್ ವಿಡಿಯೋಗಳ ಮೂಲಕ ಖರೀದಾರರನ್ನ ಸೆಳೆಯುತ್ತಿದ್ದ ಆರೋಪಿಗಳು, ಇದುವರೆಗೆ 40ಕ್ಕೂ ಅಧಿಕ ಕಾರುಗಳನ್ನು ಇದೇ ಮಾದರಿಯಲ್ಲಿ ಮಾರಾಟ ಮಾಡಿದ್ದರು ಎಂದು ಪೊಲೀಸರು ವಿವರಿಸಿದರು.
ಬಂಧಿತ ಆರೋಪಿಗಳಿಂದ ಸದ್ಯ ಇನ್ನೋವಾ ಫಾರ್ಚೂನರ್, ಮಹೀಂದ್ರಾ ಜೀಪ್, ಹ್ಯೂಂಡೈ ಕ್ರೆಟಾ ಸೇರಿದಂತೆ 2.5 ಕೋಟಿ ಮೌಲ್ಯದ 17 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.