ಹುಬ್ಬಳ್ಳಿ: ನಗರದ ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಪಿಎಂಎಸ್ಎಸ್ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಒಳಮೇಲ್ಮೈ ಪಿಒಪಿ ಕುಸಿದು ಬಿದ್ದಿದೆ. ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಕಿಮ್ಸ್ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಪೆ ಕಾಮಗಾರಿಯಿಂದ ಘಟನೆ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಪ್ರತಿಕ್ರಿಯಿಸಿ, ''ಕಟ್ಟಡದ ಒಳ ಮೇಲ್ಮೈ ಕುಸಿದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ನಾವು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಇದರ ನಿರ್ವಹಣೆಯನ್ನು ಖಾಸಗಿ ಕಂಪನಿ ನೋಡಿಕೊಳ್ಳುತ್ತಿದೆ. ಈ ಬಗ್ಗೆ ಅವರ ಗಮನಕ್ಕೂ ತರಲಾಗಿದೆ. ಈಗಾಗಲೇ ನೋಟಿಸ್ ಕೂಡ ನೀಡಲಾಗಿದೆ. ಅದರ ಜೊತೆಗೆ ಮುಂಜಾಗೃತಾ ಕ್ರಮ ಕೈಗೊಂಡು ಕಾಮಗಾರಿ ನಡೆಸಲು ಸೂಚಿಸಿದ್ದೇವೆ'' ಎಂದರು.