ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸುವುದೊಂದೇ ಮೀಸಲಾತಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಇರುವ ಶಾಶ್ವತ ಮತ್ತು ಏಕೈಕ ಪರಿಹಾರ. ಇದಕ್ಕೆ ಕಾಂಗ್ರೆಸ್ ಪಕ್ಷ ಸಿದ್ಧವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸವಾಲು ಸ್ವೀಕರಿಸಲು ಸಿದ್ಧವಿದ್ದರೆ ಅದನ್ನು ಚುನಾವಣಾ ಭರವಸೆಯಾಗಿ ಘೋಷಿಸಬೇಕು. ಇಲ್ಲದೆ ಇದ್ದರೆ ಈಗಿನ ಬಾಯಿ ಬಡಾಯಿಯನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನರೇಂದ್ರ ಮೋದಿ ಕಳೆದ ಕೆಲವು ದಿನಗಳಿಂದ ಮೀಸಲಾತಿ ಸುತ್ತ ವಿವಾದವನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿ ತೊಡಗಿದ್ದಾರೆ. ಮೀಸಲಾತಿಗೆ ಈಗಿರುವ ಶೇ 50ರ ಮಿತಿಯನ್ನು ರದ್ದುಪಡಿಸಿ ಅದನ್ನು ಶೇಕಡಾ 75ಕ್ಕೆ ಹೆಚ್ಚಿಸುವ ಭರವಸೆಯನ್ನು ಕಳೆದ ವಿಧಾನಸಭಾ ಚುನಾವಣೆಯ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದೆವು. ಈ ಘೋಷಣೆಗೆ ಕಾಂಗ್ರೆಸ್ ಪಕ್ಷ ಬದ್ಧ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೀಸಲಾತಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವುದನ್ನು ದೇಶದ ಜನತೆ ಗಮನಿಸಿದ್ದಾರೆ. ಮಂಡಲ್ ವರದಿ ಜಾರಿಯನ್ನು ಮಾತ್ರವಲ್ಲ ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿದಾಗಲೂ ಬಿಜೆಪಿ ವಿರೋಧಿಸಿ ಬೀದಿಗಿಳಿದಿತ್ತು. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದಾಗ ಬಿಜೆಪಿ ನಾಯಕರಾಗಿದ್ದ ದಿವಂಗತ ರಾಮ ಜೋಯಿಷ್ ಅವರು ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಆರ್‌ಎಸ್‌ಎಸ್ ಸಂಘ ಚಾಲಕರಾಗಿದ್ದ ಮೋಹನ್ ಭಾಗವತ್ ಅವರು ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಹಲವಾರು ಬಾರಿ ಹೇಳಿಕೆ ನೀಡಿದ್ದರು. ಈ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿರುವ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಅವರ ಪಕ್ಷಕ್ಕೆ ಹಿಂದುಳಿದ ಜಾತಿಗಳು ಮತ್ತು ದಲಿತರ ನೆನಪಾಗಿದೆ. ಇದು ಈ ಸಮುದಾಯಗಳ ಬಗೆಗಿನ ಕಾಳಜಿ ಅಲ್ಲ, ಚುನಾವಣೆ ಲಾಭಕ್ಕಾಗಿ ಹರಿಸುತ್ತಿರುವ ಮೊಸಳೆ ಕಣ್ಣೀರು ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟು ಹಿಂದುಳಿದ ಜಾತಿಗಳು ಮತ್ತು ದಲಿತರು ಜಾಣರಿದ್ದಾರೆ. ಇಂತಹ ಗಿಮಿಕ್ ಗಳು ಕನಿಷ್ಠ ಕರ್ನಾಟಕದ ನೆಲದಲ್ಲಿ ನಡೆಯಲಾರದು ಎಂದಿದ್ದಾರೆ.
ದಲಿತರ ಬಗ್ಗೆ ಬಾಯಿ ಮಾತಿನಲ್ಲಿ ಇಷ್ಟೊಂದು ಕಾಳಜಿ ತೋರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕಳಿಸಿರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಯಾಕೆ ತಿರಸ್ಕರಿಸಿದೆ ಎನ್ನುವುದನ್ನು ರಾಜ್ಯದ ಜನತೆಗೆ ತಿಳಿಸಬೇಕು. ಕರ್ನಾಟಕದವರೇ ಆಗಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ನಾರಾಯಣ ಸ್ವಾಮಿ ಅವರೇ ಮೀಸಲಾತಿ ಹೆಚ್ಚಳದ ಪ್ರಸ್ತಾಪ ನಮ್ಮ ಪರಿಶೀಲನೆಯಲ್ಲಿ ಇಲ್ಲ ಎಂದು ಹೇಳಿರುವುದು ಪ್ರಧಾನಿಯವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಎಸ್ ಸಿಪಿ/ಟಿಎಸ್ ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿದೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಹಣವನ್ನು ಮೀಸಲಿಡುವ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ಧೈರ್ಯ ತೋರುತ್ತಿಲ್ಲ. ಕೇಂದ್ರದಲ್ಲಿ ಮಾತ್ರವಲ್ಲ ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಈ ಕಾಯ್ದೆಯನ್ನು ಜಾರಿಗೆ ತರುವ ಸದ್ಬುದ್ಧಿಯನ್ನು ಬಿಜೆಪಿ ತೋರದಿರುವುದು ದಲಿತರ ಬಗೆಗಿನ ಅವರ ಹುಸಿ ಕಾಳಜಿಗೆ ಸಾಕ್ಷಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ: ಪ್ರಹ್ಲಾದ್ ಜೋಶಿ - Pralhad Joshi