ಗಂಗಾವತಿ(ಕೊಪ್ಪಳ): ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಬೆಟ್ಟದಿಂದ ಬೃಹತ್ ಕಲ್ಲುಬಂಡೆ ಜಾರಿಬಿದ್ದು ಪೈಪ್ಲೈನ್ ಡ್ಯಾಮೇಜ್ ಆಗಿದೆ. ಇದರಿಂದಾಗಿ ಗ್ರಾಮದ 2ನೇ ವಾರ್ಡ್ನ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಗ್ರಾಮದ 2ನೇ ವಾರ್ಡ್ನ ಗದ್ವಾಲ್ ಕ್ಯಾಂಪಿನ ಸಮೀಪ ಇರುವ ಬೆಟ್ಟದಿಂದ ಬೃಹತ್ ಕಲ್ಲು ಬಂಡೆಯೊಂದು ಉರುಳಿ ಬಂದು ಕುಡಿಯುವ ನೀರಿನ ಉದ್ದೇಶಕ್ಕೆ ಹಾಕಿದ್ದ ಪೈಪ್ಲೈನ್ಗೆ ತಗುಲಿ ನಿಂತಿತ್ತು. ಇದರಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿತ್ತು. ಆದರೆ ಈ ಕಲ್ಲು ಬಂಡೆ ಉರುಳಿಕೊಂಡು ಬಂದಿರುವ ರಭಸಕ್ಕೆ ಕುಡಿಯುವ ನೀರಿನ ಪೈಪ್ಗೆ ಬಡಿದಿದ್ದರಿಂದ ಡ್ಯಾಮೇಜ್ ಆಗಿದೆ. ಪರಿಣಾಮ, ಪೈಪ್ಲೈನ್ ಕಿತ್ತು ಹೋಗಿದೆ. ಈಗ ವಾರ್ಡ್ನ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ.
ಪೈಪ್ಲೈನ್ ದುರಸ್ತಿಗೆ ಎರಡು ದಿನ ಹಿಡಿಯಲಿದೆ. ಈಗಾಗಲೇ ಪಂಚಾಯಿತಿಯ ಪಿಡಿಒ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತ್ವರಿತಗತಿಯಲ್ಲಿ ಪೈಪ್ಲೈನ್ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಲೋಕೇಶ್ ರಾಠೋಡ್, "ಸದ್ಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಟ್ಯಾಂಕರ್ ಮೂಲಕ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಎರಡು ದಿನದಲ್ಲಿ ಪೈಪ್ಲೈನ್ ದುರಸ್ತಿ ಮುಗಿಸಿದ ಬಳಿಕ ಎಂದಿನಂತೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ 200 ಕೆರೆಗಳು ಖಾಲಿ, ಖಾಲಿ; ಬಿರುಕು ಬಿಟ್ಟ ನೆಲ, ಒಣಗುತ್ತಿರುವ ಬೆಳೆಗಳು - WATER SCARCITY