ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ತೆರಿಗೆಯಲ್ಲಿ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಎಷ್ಟು ಹೆಚ್ಚಳ?; ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 3 ರೂ. ಮತ್ತು ಡೀಸೆಲ್ ದರದಲ್ಲಿ 3 ರೂ. 50 ಪೈಸೆ ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆ ಮೇಲಿನ ಪ್ರಸ್ತುತ 25.92% ಮಾರಾಟ ತೆರಿಗೆಯನ್ನು 29.84%ಗೆ ಏರಿಸಿ ಸುಮಾರು 3.92%ರಷ್ಟು ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಡಿಸೇಲ್ ಬೆಲೆಯನ್ನು ಪ್ರಸ್ತುತ 14.34% ದಿಂದ 18.44% ಗೆ ಏರಿಸಿ 4.1% ರಷ್ಟು ಮಾರಾಟ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮಾರಾಟ ತೆರಿಗೆ ಹೆಚ್ಚಳದಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದೆ.
ಬೆಂಗಳೂರಲ್ಲಿ ಎಷ್ಟು? ಬೆಂಗಳೂರಲ್ಲಿ ಇಂದಿನ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 99.84 ರೂ. ಇತ್ತು. ಬೆಲೆ ಏರಿಕೆಯಿಂದ ದರ 102.84 ರೂ. ತಲುಪಿದೆ. ಡೀಸೆಲ್ ಹಳೆಯ ದರ ಬೆಂಗಳೂರಲ್ಲಿ ಪ್ರತಿ ಲೀಟರ್ಗೆ 85.93 ರೂ. ಇತ್ತು. ಇಂದಿನಿಂದ ಡೀಸೆಲ್ ಬೆಲೆ 89.43ರೂ. ತಲುಪಿದೆ. ಮೈಸೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 99.38 ರೂ ಇತ್ತು. ಈಗ ನೂತನ ದರದಂತೆ 102.39 ಆಗಿದೆ. ಡಿಸೇಲ್ ದರ 85.55 ರೂ ಇತ್ತು ಈಗ ಹೊಸ ದರ 88.53 ರೂಗೆ ತಲುಪಿದೆ.
ಇನ್ನೂ ಶಿವಮೊಗ್ಗದಲ್ಲಿ 101.15 ರೂ. ಇದ್ದ ಪೆಟ್ರೋಲ್ ದರ ಈಗ 104.21 ರೂ. ಆಗಿದೆ. 87.06 ರೂ. ಇದ್ದ ಡೀಸೆಲ್ ದರ 90.11 ರೂ. ತಲುಪಿದೆ.
ಸರ್ಕಾರ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿರುವುದರಿಂದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ ಇಲಾಖೆ ಜೊತೆ ಸಭೆ ನಡೆಸಿದ್ದರು. ಈ ವೇಳೆ ವಾಣಿಜ್ಯ ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ತಲುಪದೇ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಜೊತೆಗೆ ಆದಾಯ ಹೆಚ್ಚಿಸುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಮಾಲೋಚಿಸಿದ್ದರು. ಈ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆದಿತ್ತು.
ಈ ಬೆಲೆ ಏರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 2,500-3,000 ಕೋಟಿ ರೂ. ಆದಾಯ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.
2021ರಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆಯನ್ನು ಏರಿಕೆ ಮಾಡಿದೆ.
ಇದನ್ನೂ ಓದಿ: ಎಟಿಎಂ ಬಳಕೆದಾರರಿಗೆ ಬ್ಯಾಡ್ ನ್ಯೂಸ್: ನಗದು ಹಿಂಪಡೆಯುವ ಶುಲ್ಕ ಹೆಚ್ಚಳ - Cash Withdrawal Charges