ಬಾಗಲಕೋಟೆ: ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲಾಕ್ಮೇಲ್ ಮಾಡಿ ಕೋಟ್ಯಂತರ ರೂ. ಸುಲಿಗೆ ಮಾಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿರುವ ಸಿಇಎನ್ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಪ್ರಕಾಶ್ ಮುಧೋಳ ಎಂಬಾತನೇ ಬೆದರಿಕೆ ಹಾಕಿ, ಹಣ ವಸೂಲಿ ಮಾಡಿ ಬಂಧಿತನಾಗಿರುವ ಆರೋಪಿ. ಡಿಎಸ್ಪಿ, ಎಡಿಜಿಪಿ ಹೆಸರಿನಲ್ಲಿ ಪೋನ್ ಕರೆ ಮಾಡಿ, ಬೆದರಿಕೆ ಹಾಕಿ ಬಾಗಲಕೋಟೆಯ ರಾಮಾರೂಢ ಮಠದ ಪರಮ ರಾಮಾರೂಢ ಶ್ರೀಗಳಿಂದ ಹಣ ಸುಲಿಗೆ ಮಾಡಲಾಗಿದೆ. ಹಣ ನೀಡದಿದ್ದರೆ ಮಾನ ಮರ್ಯಾದೆ ತೆಗೆದು ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾನೆ. ಇದರಿಂದ ಭಯಗೊಂಡು ಒಂದು ಕೋಟಿ ರೂಪಾಯಿ ಹಣ ನೀಡಿರುವುದಾಗಿ ಸ್ವಾಮೀಜಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಭೇಟಿಯಾಗಿ 61 ಲಕ್ಷ ರೂ. ಹಾಗೂ ಹುಬ್ಬಳ್ಳಿಯಲ್ಲಿ ಭೇಟಿಯಾಗಿ 39 ಲಕ್ಷ ರೂ. ಹಣವನ್ನು ಆರೋಪಿ ಪಡೆದಿದ್ದ. ಒಂದು ಕೋಟಿ ಹಣ ಪಡೆದ ಮೇಲೆಯೂ, ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ವಾಮೀಜಿ, ಬಳಿಕ ಈ ಬಗ್ಗೆ ಬಾಗಲಕೋಟೆ ಎಸ್ಪಿ ಭೇಟಿ ಮಾಡಿ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಆರೋಪಿಯ ಸ್ಥಳ ಮಹಜರು ನಡೆಸಿರುವ ಸಿಇಎನ್ ಠಾಣೆ ಪೊಲೀಸರು, ಮುಂದಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಲೋನ್ ಆ್ಯಪ್ಗಳ ಬಗ್ಗೆ ಜಾಗರೂಕರಾಗಿರಿ: ದಾವಣಗೆರೆ ಪೊಲೀಸ್ ಎಚ್ಚರಿಕೆ - Instant Loan Mobile Application