ಬೆಂಗಳೂರು: ಪೆರಿಫರೆಲ್ ರಿಂಗ್ ರೋಡ್ ಯೋಜನೆಯನ್ನು ಎಕನಾಮಿಕ್ ಕಾರಿಡಾರ್ ಎಂದು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ಶೈಲೇಂದ್ರ ಬೆಲ್ದಾಳೆ, ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯ ಕುರಿತು ಸರ್ಕಾರದ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, "ಪೆರಿಫರೆಲ್ ರಿಂಗ್ ರಸ್ತೆಯನ್ನು ಎಕನಾಮಿಕ್ ಕಾರಿಡಾರ್ ಎಂದು ಹೆಸರು ಬದಲಾಯಿಸುತ್ತೇವೆ. 73 ಕಿ.ಮೀ. ಉದ್ಧದ ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೊಂಡು, ಇದರ ಮಾದರಿಯನ್ನು ಸ್ವಲ್ಪ ಬದಲಾಯಿಸುತ್ತೇವೆ" ಎಂದರು.
"ಕಳೆದ ತಿಂಗಳು ಟೆಂಡರ್ ಕರೆಯಲಾಗಿದ್ದು, ಬಿಡ್ ಕೂಡ ಸ್ವೀಕಾರ ಆಗಿದೆ. ಹಣಕಾಸು ಕ್ರೋಢೀಕರಣ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಭೂಸ್ವಾಧೀನ ಸೇರಿ 23 ಸಾವಿರ ಕೋಟಿ ರೂಪಾಯಿ ಅಗತ್ಯ ಇದೆ. ಭೂಮಿ ಕೊಟ್ಟ ರೈತರಿಗೂ ಹೆಚ್ಚು ಪರಿಹಾರ ಕೊಡಲು ಚಿಂತನೆ ಇದೆ. ಯೋಜನೆ ಬಗ್ಗೆ ಸಂಪುಟ ಸಚಿವ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ" ಎಂದರು.
"15 ವರ್ಷದಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ಯೋಜನೆಗೆ 2,596 ಎಕರೆ ಜಮೀನು ಬೇಕು. ಈ ಪೈಕಿ ಕೇವಲ 220 ಎಕರೆ ಮಾತ್ರ ಸರ್ಕಾರದ ಜಮೀನಾಗಿದೆ. ಉಳಿದ ಜಮೀನು ಖಾಸಗಿಯವರದ್ದಾಗಿದೆ. ಕೋರ್ಟ್ನಲ್ಲಿ ಪರಿಹಾರ ಸಂಬಂಧ ತೀರ್ಪು ಇದೆ. ಇದನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿ ತೀರ್ಮಾನ ಮಾಡಲಿದ್ದೇವೆ. ಸ್ವಾಧೀನ ಮಾಡಿದ ಭೂಮಿಯನ್ನು ಡಿನೋಟಿಫೈ ಮಾಡಲ್ಲ ಎಂದು ರೈತರಿಗೆ ನಾನು ಈಗಾಗಲೇ ಹೇಳಿದ್ದೇನೆ. 23,000 ಕೋಟಿ ರೂ. ಹಣ ಈ ಯೋಜನೆಗೆ ಬೇಕಾಗಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಾವು ಬದ್ಧರಾಗಿದ್ದೇವೆ" ಎಂದರು.
ಇದನ್ನೂ ಓದಿ: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಲು ಪಕ್ಷಭೇದ ಮರೆತು ಶಾಸಕರ ಒತ್ತಾಯ