ಮಂಗಳೂರು: ''ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಾಜ್ಯಕ್ಕೆ ಬಾಂಬ್ ಕೊಟ್ಟ ಕಾಂಗ್ರೆಸ್ ಪಕ್ಷದ ಕೈಗೆ ಜನತೆ ಚೊಂಬು ಕೊಡುತ್ತಾರೆ'' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್, ಹಿಂದೂಗಳ ಹತ್ಯೆ, ಹಲ್ಲೆಗಳು ನಡೆಯುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗ ಪ್ರಕರಣವನ್ನು ಕಾಂಗ್ರೆಸ್ ತಿರುಚುವ ಕೆಲಸ ಮಾಡಿತ್ತು. ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿಯಾದಾಗ ಅವರ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡ ಹೋಗಿಲ್ಲ. ಇದೀಗ ನೇಹಾ ಹತ್ಯೆಯಾಗಿದೆ ಅವರದ್ದೇ ಪಕ್ಷದ ಕಾರ್ಪೋರೇಟರ್ ಪುತ್ರಿ. ಆದರೆ, ಅವರ ಮನೆಗೆ ಹೋಗಿ ಸಾಂತ್ವನವನ್ನು ಹೇಳುವ ಕಾರ್ಯವನ್ನು ಮಾಡಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ'' ಎಂದರು.
''ಕಾಂಗ್ರೆಸ್ನೊಂದಿಗೆ ಎಸ್ಡಿಪಿಐ ಒಳಸಂಬಂಧ ಇರಿಸಿಕೊಂಡಿದೆ. ಪಿಎಫ್ಐ ನಿಷೇಧದ ಬಳಿಕ ಹಿಂದೂಗಳ ಹತ್ಯೆಗಳು ನಿಯಂತ್ರಣಕ್ಕೆ ಬಂದಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರದ ತುಷ್ಟೀಕರಣದಿಂದ ಮತ್ತೆ ಇಂತಹ ಹತ್ಯೆಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಇಂದು ಬಹುಸಂಖ್ಯಾತ ಹಿಂದೂಗಳಿಗೆ ಬದುಕುವುದು ಕಷ್ಟವಾಗಿದೆ. ಹತ್ಯೆಗಳಾದಲ್ಲಿ ಹತ್ಯೆಯ ತನಿಖೆಯನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಎನ್ಐಎ ಸಕ್ರಿಯವಾಗಿರುವುದರಿಂದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ತನಿಖೆಯಾಗಿದೆ. ಅಂದು ಕಾಂಗ್ರೆಸ್ ಇದ್ದಿದ್ದರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಳ್ಳ ಹಿಡಿಯುತ್ತಿತ್ತು'' ಎಂದು ನಳಿನ್ ಕುಮಾರ್ ಕಿಡಿಕಾರಿದರು.
''ನೇಹಾ ಹತ್ಯೆಯು ಲವ್ ಜಿಹಾದ್ ಮುಂದುವರಿದ ಭಾಗ. ಹಿಂದೂ ಹೆಣ್ಣುಮಕ್ಕಳು ಮುಸ್ಲಿಂ ಯುವಕರನ್ನು ಪ್ರೀತಿಸದಿದ್ದರೆ ಹತ್ಯೆಯ ಭಾಗ್ಯ. ಮದುವೆಯಾದರೆ ಸೂಟ್ ಕೇಸ್ ಭಾಗ್ಯ. ಅಂದರೆ ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿಡುತ್ತಾರೆ. ಇದಕ್ಕೆ ಸಿದ್ದರಾಮಯ್ಯ ತುಷ್ಟೀಕರಣ ನೀತಿ ಕಾರಣ'' ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
''ನೇಹಾ ಹತ್ಯೆಗಳಂತಹ ಪ್ರಕರಣಗಳು ನಡೆದಾಗ ಕಠಿಣ ಕ್ರಮಗಳನ್ನು ಕೈಗೊಳ್ಳದ ಹೇಡಿ ಸರಕಾರ. ಇಂದು ಕಾಲೇಜಿಗೆ ಹೋದ ಯಾವ ವಿದ್ಯಾರ್ಥಿಗಳು ಬದುಕಿ ಬರಬಹುದು ಎಂಬ ಭರವಸೆಯಿಲ್ಲ. ಇಂತಹ ಪ್ರಕರಣಗಳಾದ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ಯಾವ ಭರವಸೆಯೂ ಇಲ್ಲ. ತುಷ್ಟೀಕರಣ, ರಾಜಕಾರಣ, ಮತ ಬ್ಯಾಂಕ್ ಬದಿಗಿಟ್ಟು ಮಾನವೀಯತೆಯ ದೃಷ್ಟಿಯಿಂದ ಇಂತಹ ಪ್ರಕರಣಗಳಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು'' ಎಂದರು.
''ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಂತೆ ನೇಹಾ ಹತ್ಯೆ ಪ್ರಕರಣವೂ ಎನ್ಐಎಗೆ ಒಪ್ಪಿಸಬೇಕಿತ್ತು. ಆದರೆ, ಕಾಂಗ್ರೆಸ್ಗೆ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವ ಧೈರ್ಯವೂ ಇಲ್ಲ. ಕಾಂಗ್ರೆಸ್ ರಾಜ್ಯವನ್ನು ಅಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುತ್ತಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ 6 ವರ್ಷ ಉಚ್ಚಾಟನೆ - K S Eshwarappa Expelled