ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬ ಗಣೇಶ ಚತುರ್ಥಿಗೆ ಕೌಂಟ್ ಡೌನ್ ಶುರುವಾಗಿದೆ. ಅದ್ಧೂರಿಯಾಗಿ ಹಬ್ಬ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದಾರೆ. ಮಾರುಕಟ್ಟೆಗಳಲ್ಲಂತೂ ವಿಘ್ನನಿವಾರಕನ ಡಿಫರೆಂಟ್ ಲುಕ್, ಸ್ಟೈಲ್ಗೆ ಸಿಲಿಕಾನ್ ಸಿಟಿ ಮಂದಿ ಫಿದಾ ಆಗಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತಿರುವ ಮುದ್ದು ಮುದ್ದಾಗಿರುವ ಏಕದಂತನ ನೋಡಲು ಎರಡು ಕಣ್ಣುಗಳು ಸಾಲದು. ಮಾರುಕಟ್ಟೆಗೆ ನಾನಾ ವಿನ್ಯಾಸದ ಗಣೇಶನ ಮೂರ್ತಿಗಳು ಕಾಲಿಟ್ಟಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ಒಂದು ಕಡೆ ಶಿವನ ಅವತಾರದಲ್ಲಿ, ಮತ್ತೊಂದು ಕಡೆ ಕೃಷ್ಣನ ಅವತಾರದಲ್ಲಿರುವ ವಿಘ್ನ ವಿನಾಶಕ ಕಾಣಸಿಗುತ್ತಿದ್ದಾನೆ. ಇನ್ನೊಂದು ಕಡೆ ಅಯೋಧ್ಯೆಯ ರಾಮನ ಜೊತೆ ಇರುವ ಬಾಲಚಂದ್ರ, ಕರಗ ಹೊತ್ತು ನಿಂತಿರುವ ವಿಘ್ನೇಶ್ವರ, ಇಷ್ಟೇ ಅಲ್ಲದೇ ಬಣ್ಣ ಬಣ್ಣದ ಬೃಹತ್ ಆಕಾರದ ಗಣೇಶ ಭಕ್ತರನ್ನು ಸೆಳೆಯುತ್ತಿದ್ದಾನೆ.
ಈಗಷ್ಟೇ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ ಖುಷಿಯಲ್ಲಿರುವ ಜನರು, ಗಣೇಶ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಯನಾಡ್ನಲ್ಲಿ ನಡೆದ ಪ್ರಕೃತಿ ದುರಂತ ಹಿನ್ನೆಲೆಯಲ್ಲಿ ಸೇವ್ ಅರ್ಥ್ ಕಾನ್ಸೆಪ್ಟ್ನಲ್ಲಿ ಕೂಡ ವಿನಾಯಕನ ಮೂರ್ತಿ ರೂಪಿಸಲಾಗಿದೆ. ಹೀಗೆ ಒಂದಕ್ಕಿಂತ ಒಂದು ಗಣೇಶ ವಿಗ್ರಹಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.
ಮುಖ್ಯವಾಗಿ ಯಶವಂತಪುರದ ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಖುದ್ದಾಗಿ ಕೈಯಿಂದ ಎಂಬ್ರಾಯ್ಡರಿ ಡಿಸೈನ್ ಮಾಡಿರುವ ಹಿನ್ನೆಲೆ ಅಂತಹ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ಮೂರ್ತಿಗೆ 1 ಸಾವಿರದಿಂದ 3 ಸಾವಿರ ರೂಪಾಯಿವರಗೆ ಬುಕ್ಕಿಂಗ್ ಬರುತ್ತಿದ್ದು, ಹೊರ ರಾಜ್ಯದ ಗಡಿ ಭಾಗದ ಉರುಗಳಿಂದಲೂ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ವ್ಯಾಪಾರ ಉತ್ತಮವಾಗಿದೆ ಎಂದು ತಯಾರಕರು ಖುಷಿಯಿಂದ ಹೇಳಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ವಿಘ್ನ ನಿವಾರಕನ ಹಬ್ಬಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿರುವ ಸಿಟಿ ಮಂದಿ ಹೆಚ್ಚಾಗಿ ಮಣ್ಣಿನ ಗಣೇಶನ ಮೂರ್ತಿಗಳಿಗೆ ಮೊರೆ ಹೋಗುತ್ತಿರುವುದು ಖುಷಿಯ ಸಂಗತಿಯಾಗಿದೆ.
"ಈ ಬಾರಿ ಹಬ್ಬಕ್ಕೆ ಚಿಕ್ಕ ಗಣೇಶನ ಮೂರ್ತಿಯಿಂದ ಹಿಡಿದು, ಹದಿನೈದು ಅಡಿ ಎತ್ತರದ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ವಿಶೇಷವಾಗಿ ಅಯೋಧ್ಯೆಯ ರಾಮಮಂದಿರದ ರಾಮನ ಗಣೇಶ ಮೂರ್ತಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಪಿಒಪಿ ಗಣೇಶ ಮೂರ್ತಿಗಳಿಂದ ಮಾಲಿನ್ಯ ಹೆಚ್ಚಳ, ನೀರು ಕಲುಷಿತವಾಗುತ್ತದೆ ಎಂದು ಬ್ಯಾನ್ ಮಾಡಲಾಗಿದೆ. ಹೀಗಾಗಿ ಮಣ್ಣಿನ ಗಣಪನನ್ನು ಖರೀದಿಸಲು ಜನ ಮುಂದಾಗುತ್ತಿದ್ದಾರೆ" ಎಂದು ಯಶವಂತಪುರದ ಗಣೇಶ ಮೂರ್ತಿ ವ್ಯಾಪಾರಿ ಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ನಾಳೆ ಗಣೇಶ ಚತುರ್ಥಿ: ವಿನಾಯಕನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದರು - Ganesh Chaturthi