ನವದೆಹಲಿ: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಆಯೋಜಿಸಲಾದ 18ನೇ 'ಪ್ರವಾಸಿ ಭಾರತೀಯ ದಿವಸ್' ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್ ರೈಲು ಸೇವೆಯನ್ನೂ ಉದ್ಘಾಟಿಸಲಿದ್ದಾರೆ.
ಆಂಧ್ರ ಪ್ರದೇಶದಲ್ಲಿನ ಕಾರ್ಯಕ್ರಮದ ಬಳಿಕ ಬುಧವಾರ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ಅವರನ್ನು ರಾಜ್ಯಪಾಲ ಹರಿ ಬಾಬು ಕಂಬಂಪತಿ, ಮುಖ್ಯಮಂತ್ರಿ ಮೋಹನ್ ಚರಣ್ ಮಾಂಜಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಅಧ್ಯಕ್ಷ ಮನ್ಮೋಹನ್ ಸಮಲ್ ಮತ್ತಿತರ ನಾಯಕರು ಬರಮಾಡಿಕೊಂಡರು.
ଭୁବନେଶ୍ୱରରେ କିଛି ସମୟ ପୂର୍ବରୁ ପହଞ୍ଚିଲି । ଆସନ୍ତାକାଲି ପ୍ରବାସୀ ଭାରତୀୟ ଦିବସ ୨୦୨୫ରେ ଯୋଗ ଦେବାକୁ ନେଇ ଉତ୍ସାହିତ ଅଛି । pic.twitter.com/yp6Pt5cJmL
— Narendra Modi (@narendramodi) January 8, 2025
ವಿಕಸಿತ ಭಾರತಕ್ಕೆ ವಲಸಿಗರ ಕೊಡುಗೆ: ಈ ಬಾರಿಯ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ದೇಶಗಳಿಂದ ಜನರು ಭಾಗಿಯಾಗುತ್ತಿದ್ದು, ವಿಕಸಿತ ಭಾರತಕ್ಕೆ ವಲಸಿಗರ ಕೊಡುಗೆ ಎಂಬ ಧ್ಯೇಯವಾಕ್ಯದಲ್ಲಿ ಸಮಾವೇಶ ನಡೆಯಲಿದೆ.
ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್ ರೈಲು: ಪ್ರವಾಸಿ ಭಾರತ್ ದಿವಸ್ ಸಮಾವೇಶದ ಮೈದಾನಕ್ಕೆ ಬೆಳಗ್ಗೆ 10ಕ್ಕೆ ಆಗಮಿಸಲಿರುವ ಮೋದಿ, ನಾಲ್ಕು ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನದವರೆಗೆ ಸಮಾವೇಶದಲ್ಲಿ ಹಾಜರಿದ್ದು, ಬಳಿಕ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಹೊರಡಲಿರುವ ಭಾರತೀಯ ವಲಸೆಗಾರರಿಗೆ ವಿಶೇಷ ಪ್ರವಾಸಿ ರೈಲು 'ಪ್ರವಾಸಿ ಭಾರತೀಯ ಎಕ್ಸ್‌ಪ್ರೆಸ್'ಗೆ ವರ್ಚುಯಲ್ ವೇದಿಕೆಯಲ್ಲಿ ಚಾಲನೆ ನೀಡಲಿದ್ದಾರೆ. ಈ ರೈಲು ಮೂರು ವಾರಗಳ ಕಾಲ ಭಾರತದ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ವಿವಿಧ ಸ್ಥಳಗಳಿಗೆ ಪ್ರಯಾಣಿಸಲಿದೆ.
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೋ ಅಧ್ಯಕ್ಷ ಕ್ರಿಸ್ಟಿನೆ ಕಾರ್ಲಾ ಕಂಗಲೊ ಅವರು ವರ್ಚುಯಲ್ ಆಗಿ ಭಾಷಣ ಮಾಡಲಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 2003ರಲ್ಲಿ ಪ್ರವಾಸಿ ಭಾರತೀಯ ದಿವಸ್ ಸಮಾವೇಶಕ್ಕೆ ಮೊದಲ ಬಾರಿ ಚಾಲನೆ ನೀಡಲಾಯಿತು.
ಮುಖ್ಯಾಂಶಗಳು:
- ಸಾಗರೋತ್ತರ ಭಾರತೀಯ ಸಮುದಾಯವನ್ನು ಗುರುತಿಸುವುದು ಮತ್ತು ಅವರು ಭಾಗಿಯಾಗಲು ಇದೊಂದು ಮಹತ್ವದ ವೇದಿಕೆ.
- ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಕೇಂದ್ರ ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ನಡೆಸಲಾಗುತ್ತದೆ.
- ದೇಶದ ವಿವಿಧ ನಗರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಲ್ಲಿನ ವೈವಿಧ್ಯತೆ ಮತ್ತು ಪ್ರಗತಿಯನ್ನು ಬಿಂಬಿಸಲಾಗುತ್ತದೆ.
ಇದನ್ನೂ ಓದಿ: ಹಿಂದೂ ಧರ್ಮದ ಮೇಲಿನ ಪ್ರೀತಿ ನನ್ನನ್ನು ಮಹಾ ಕುಂಭಮೇಳಕ್ಕೆ ಕರೆ ತಂದಿತು: ಫ್ರೆಂಚ್ ಮಹಿಳೆ