ಹಾವೇರಿ: ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಪೋಷಕರು ಕರ್ನಾಟಕ ಒನ್ ಕೇಂದ್ರದ ಮುಂದೆ ರಾತ್ರಿಯಿಡೀ ನಿದ್ದೆ ಬಿಟ್ಟು ಕಾಯುತ್ತಿದ್ದಾರೆ. ಹಾವೇರಿ ನಗರದ ಗುರುಭವನದ ಬಳಿ ಇರುವ ಕೇಂದ್ರದೆದುರು ಕಾಯುವ ಪೋಷಕರ ಪರಿಸ್ಥಿತಿ ಹೇಳತೀರದಾಗಿದೆ.
ಆಧಾರ್ ಕಾರ್ಡ್ನಲ್ಲೊಂದು ಹೆಸರು, ಶಾಲೆಯ ದಾಖಲಾತಿಯಲ್ಲೊಂದು ಹೆಸರಿರುವ ವ್ಯತ್ಯಾಸಗಳನ್ನು ಸರಿಪಡಿಸಲು ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರದಲ್ಲಿ ಕೇವಲ ದಿನಕ್ಕೆ 50 ಜನರ ಆಧಾರ್ ಕಾರ್ಡ್ ತಿದ್ದುಪಡಿ ಮಾತ್ರ ಮಾಡಲಾಗುತ್ತಿದೆ. ಇದಕ್ಕಾಗಿ ಸರದಿಯಲ್ಲಿ ಚಳಿ ಲೆಕ್ಕಿಸದೇ ರಾತ್ರಿ ಕಳೆಯುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ತಿದ್ದುಪಡಿ ಕೇಂದ್ರಗಳನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.
4-5 ದಿನಗಳಿಂದ ಕೇಂದ್ರಕ್ಕೆ ಬರುತ್ತಿದ್ದೇವೆ. ಹೆಚ್ಚಾಗಿ ಗಂಡು ಮಕ್ಕಳೇ ಕ್ಯೂನಲ್ಲಿ ನಿಂತಿರುತ್ತಾರೆ. ಹೆಂಗಸರು ಬಂದರೆ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಬಂದರೆ ಪಾಳಿಯಲ್ಲಿ ನಿಲ್ಲಬೇಕು. ಚೀಟಿ ತೆಗೆದುಕೊಳ್ಳಬೇಕು. ಹಾಗಾದರೆ ಮಾತ್ರ ಕೊಡುತ್ತೇವೆ, ಇಲ್ಲವಾದರೆ ಆಗುವುದಿಲ್ಲ ಎನ್ನುತ್ತಾರೆ. ನಾವು ಮಧ್ಯಾಹ್ನ ಎರಡು ಗಂಟೆಗೆ ಇಲ್ಲಿ ಬಂದು ಕುಳಿತಿದ್ದೇವೆ. ನಾಳೆ ಬೆಳಿಗ್ಗೆ 10 ಗಂಟೆಯವರೆಗೆ ಕಾಯಬೇಕು. ಅವರು ಯಾವಾಗ ಚೀಟಿ ಕೊಡುತ್ತಾರೋ ಆಗ ನಾವು ಬಂದು ತೆಗೆದುಕೊಂಡು ಹೋಗಬೇಕು. ಸರ್ವರ್ ಬ್ಯುಸಿ ಇದೆ, ಕಾಯಿರಿ ಎನ್ನುತ್ತಾರೆ. ಪದೇ ಪದೇ ಹೋಗುವುದು, ಬರುವುದು ಆಗಿದೆಯೇ ಹೊರತು ಬೇರೇನೂ ಆಗಿಲ್ಲ. ಮನೆಯಲ್ಲಿ ಗಂಡು ಮಕ್ಕಳೇ ಇಲ್ಲದವರು ಏನು ಮಾಡಬೇಕು? ಎಂದು ರೇಖಾ ಎಂಬವರು ಅಸಹಾಯಕತೆ ವ್ಯಕ್ತಪಡಿಸಿದರು.
ಮಂಜುಳಾ ಎಂಬವರು ಮಾತನಾಡಿ, ಆಧಾರ್ ಕಾರ್ಡ್ ತಿದ್ದುಪಡಿಗೆ ಒಂದು ವಾರದಿಂದ ಎಲ್ಲೆಡೆ ಅಡ್ಡಾಡಿ ಇಲ್ಲಿಗೆ ಬಂದಿದ್ದೇವೆ. ಬೆಳಿಗ್ಗೆ ಟೋಕನ್ ಸಿಗುವುದಿಲ್ಲ. ಟೋಕನ್ ಬೇಕಾದರೆ ರಾತ್ರಿ ಕ್ಯೂ ಹಚ್ಚಬೇಕು. ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳನ್ನು ಬಿಟ್ಟು ಬಂದಿದ್ದೇವೆ. ನಾವು ಕೂಲಿ ಕೆಲಸ ಮಾಡಿ ಜೀವನ ನಡೆಸುವವರು. ಕೂಲಿ ಮಾಡಿದರೆ ಆಯಿತು ಇಲ್ಲಾಂದ್ರೆ ಇಲ್ಲ. ಈ ಆಧಾರ್ ಕಾರ್ಡ್ ಸರಿಪಡಿಸಲು ಒಂದು ವಾರದಿಂದ ಕೆಲಸ ಬಿಟ್ಟು ಇಲ್ಲಿ ಬಂದಿದ್ದೇವೆ. ಪಾಳಿ ಮೊದಲು ಬರಲು ನಾವು ರಾತ್ರಿಯೇ ಬಂದು ಕಾಯುತ್ತಿದ್ದೇವೆ. ಊಟ, ನೀರು ಏನೂ ಇಲ್ಲ ಎಂದು ಬೇಸರಿಸಿದರು.
ಜಿಲ್ಲಾಧಿಕಾರಿ ಹೇಳಿದ್ದೇನು?: ''ಶಾಲಾ ಮಕ್ಕಳ ಅಧಾರ್ ಕಾರ್ಡ್ ತಿದ್ದುಪಡಿ ಮಾಡಲು ಸದ್ಯ ಯಾವುದೇ ಗಡುವು ನೀಡಿಲ್ಲ. ಈ ಬಗ್ಗೆ ಪೋಷಕರು ಆತಂಕಪಡುವ ಅಗತ್ಯವಿಲ್ಲ'' ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ. ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಅವರು, ''ಪೋಷಕರು ತಪ್ಪು ತಿಳುವಳಿಕೆಯಿಂದ ಕರ್ನಾಟಕ ಒನ್ ಮುಂದೆ ಸರತಿಯಲ್ಲಿ ರಾತ್ರಿ ಕಳೆದಿರುವುದು ಗೊತ್ತಾಗಿದೆ. ಮಕ್ಕಳ ಹೆಸರು ಶಾಲೆ ಮತ್ತು ಅಧಾರ್ ಕಾರ್ಡ್ಗಳಲ್ಲಿ ಒಂದೇ ರೀತಿ ಇರಬೇಕು ಎನ್ನುವ ಸುತ್ತೋಲೆ ಶಿಕ್ಷಣ ಇಲಾಖೆಯಿಂದ ಬಂದಿದೆ. ಶಾಲೆಯ ದಾಖಲೆಯಲ್ಲಿರುವಂತೆ ಅಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡುವಂತೆ ಶಿಕ್ಷಕರು ಪೋಷಕರಿಗೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಹೆಚ್ಚಿನ ಕಾಲಾವಕಾಶವಿಲ್ಲ ಎಂಬ ತಪ್ಪು ಸಂದೇಶದಿಂದ ಪೋಷಕರು ಕರ್ನಾಟಕ ವನ್ ಕೇಂದ್ರದ ಮುಂದೆ ರಾತ್ರಿ ಕಳೆದಿದ್ದಾರೆ'' ಎಂದು ತಿಳಿಸಿದರು.
''ಅಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ಕರ್ನಾಟಕ ಒನ್ ಕೇಂದ್ರದಲ್ಲಿ ಮಾತ್ರ ಅವಕಾಶ ಇರುವ ಕಾರಣ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಬಗ್ಗೆ ಗ್ರಾಮ ಒನ್ ಕೇಂದ್ರದಲ್ಲಿಯೂ ಅವಕಾಶ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಜೊತೆಗೆ, ಹೆಚ್ಚಿನ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲು ಕೋರಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಈ ರೀತಿ ತಿದ್ದುಪಡಿ ಆಗದಿದ್ದರೆ ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳು ನಿಲ್ಲುತ್ತವೆ ಎಂಬ ತಪ್ಪು ಸಂದೇಶಗಳಿಗೆ ಪೋಷಕರು ಕಿವಿಗೊಡಬೇಡಿ'' ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
''ವ್ಯವಸ್ಥೆ ಸರಿಯಾದ ಮೇಲೆ ಇದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡುತ್ತೇವೆ. ಅಧಾರ್‌ನಲ್ಲಿ ಹೆಸರು ಬದಲಾವಣಿಗೆ ಕರ್ನಾಟಕ ಒನ್ ಮತ್ತು ಕೆಲ ಬ್ಯಾಂಕ್‌ಗಳಲ್ಲಿ ಮಾತ್ರ ಅವಕಾಶ ನೀಡಿದ್ದಾರೆ. ಕೇಂದ್ರಗಳು ಕಡಿಮೆ ಇವೆ, ಅವುಗಳನ್ನು ಹೆಚ್ಚಿಗೆ ಮಾಡುತ್ತೇವೆ. ಜಿಲ್ಲೆಯಲ್ಲಿ ಹಾವೇರಿ ಸೇರಿದಂತೆ 19 ಕರ್ನಾಟಕ ಒನ್ ಕೇಂದ್ರಗಳಿವೆ. ಶಿಕ್ಷಕರು ಮತ್ತು ಪೋಷಕರ ತಪ್ಪು ತಿಳುವಳಿಕೆಯಿಂದ ಹೀಗಾಗಿದೆ. ಎಲ್ಲ ಶಿಕ್ಷಣಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ಕುರಿತಂತೆ ತಿಳಿಸಿದ್ದೇವೆ'' ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಧಿಕಾರಿಗಳ ಭೇಟಿ: ಈ ಮಧ್ಯೆ ಹಾವೇರಿ ಕರ್ನಾಟಕ ಒನ್ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ್, ಉಪವಿಭಾಗಾಧಿಕಾರಿ ಚೆನ್ನಬಸಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದ ಸಿಬ್ಬಂದಿ ಜೊತೆ ಚರ್ಚಿಸಿದ ಅಧಿಕಾರಿಗಳು, ಈ ರೀತಿಯಾಗದಂತೆ ಕ್ರಮ ತೆಗೆದುಕೊಳ್ಳುವ ಕುರಿತು ಚರ್ಚಿಸಿದರು. ಅಲ್ಲದೆ, ಟೋಕನ್ ವ್ಯವಸ್ಥೆಯನ್ನೂ ಸರಿಯಾಗಿ ನಿರ್ವಹಿಸುವಂತೆ ಅಧಿಕಾರಿಗಳು ತಾಕೀತು ಮಾಡಿದರು.
ಇದನ್ನೂ ಓದಿ: ಲೈಸನ್ಸ್ ಪಡೆಯದೆ ಶಾಲೆಗೆ ಬೈಕ್ ಸವಾರಿ: 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರಿಗೆ ದಂಡ