ಮಂಗಳೂರು : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇಂದು ಸಂಜೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇದರ ಮಧ್ಯೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪದ್ಮರಾಜ್ ಟಿಕೆಟ್ ತಮಗೇ ಸಿಗುವ ವಿಶ್ವಾಸ ಹೊಂದಿದ್ದಾರೆ.
ಪದ್ಮರಾಜ್ ಅವರು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಶಿಷ್ಯ. ವಕೀಲರು ಆಗಿರುವ ಪದ್ಮರಾಜ್ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿಯಾಗಿಯೂ ಕಳೆದ ಹಲವು ಸಮಯಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪದ್ಮರಾಜ್ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು.
ಆ ಸಂದರ್ಭದಲ್ಲಿ ಪದ್ಮರಾಜ್ ಅವರಿಗೆ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಪದ್ಮರಾಜ್ ಅವರು ಇದೀಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಖಾತ್ರಿಯಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಪದ್ಮರಾಜ್, ವಿನಯ್ ಕುಮಾರ್ ಸೊರಕೆ ಮತ್ತು ರಮಾನಾಥ ರೈ ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ಹೈಕಮಾಂಡ್ ಪದ್ಮರಾಜ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂಬುದಾಗಿ ತಿಳಿದುಬಂದಿದೆ. ಪದ್ಮರಾಜ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಸಮುದಾಯವಾದ ಬಿಲ್ಲವ ಸಮುದಾಯದವರಾಗಿದ್ದಾರೆ. ಈಗಾಗಲೇ ಟಿಕೆಟ್ ಕನ್ಫರ್ಮ್ ಆಗಿರುವುದರಿಂದ ಬೆಳಗ್ಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದೇನೆ. ಆದರೆ, ರಾಷ್ಟ್ರೀಯ ಪಕ್ಷದಲ್ಲಿ ಅದರದ್ದೇ ಆದ ರೀತಿ ನೀತಿಗಳಿವೆ. ಆದರೆ, ಖಂಡಿತವಾಗಲೂ ಜನರ ಭಾವನೆಗಳಿಗೆ ಬೆಲೆಕೊಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಆದ್ದರಿಂದ ತನಗೆ ಟಿಕೆಟ್ ದೊರಕುತ್ತದೆ ಎಂಬ ಧೈರ್ಯ ನನಗಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ದ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲವೋ ?: ಮೋದಿ ವಿರುದ್ದ ಅಭ್ಯರ್ಥಿಗಳಿಲ್ಲವೋ? ಅಥವಾ ಕಾಂಗ್ರೆಸ್ ವಿರುದ್ದ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲವೋ ? ಎಂದು ಸಚಿವ ಹೆಚ್ ಕೆ ಪಾಟೀಲ್ ಅವರು ಪ್ರಶ್ನಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಕಣಕ್ಕಿಳಿಸಲು ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳಿಲ್ಲ ಎಂಬ ಬಿಜೆಪಿಯವರ ಆರೋಪ ಕುರಿತಂತೆ ಮಾತನಾಡಿದರು.
ಹಾವೇರಿ ಮತ ಕ್ಷೇತ್ರದಲ್ಲಿ ಆನಂದ್ ಗಡ್ಡದೇವರಮಠ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯವರಿಗೆ ಇನ್ನೂ ಅವರಿಗೆ ಲಿಸ್ಟ್ ಫೈನಲ್ ಮಾಡೋದಾಗಿಲ್ಲ ಎಂದು ಆರೋಪಿಸಿದರು. ಬಿಜೆಪಿಯವರು ಎಲ್ಲೆಲ್ಲಿ ಅಭ್ಯರ್ಥಿ ಹಾಕ್ತಾರೋ ಅಲ್ಲೆಲ್ಲ ಬಂಡಾಯ ಶುರುವಾಗಿದೆ. ಹಾವೇರಿ ಏನಿದೆ? ಶಿವಮೊಗ್ಗ ಏನಿದೆ? ಕೊಪ್ಪಳ ಏನಿದೆ? ನೋಡ್ರಿ ಎಂದು ಹೆಚ್ ಕೆ ಪಾಟೀಲ್ ಪ್ರಶ್ನಿಸಿದರು.
ಬಿಜೆಪಿಯವರು ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯವರಿಗೆ ಹತಾಶ ಭಾವನೆ ಕಾಡ್ತಾ ಇದೆ. ಈ ಚುನಾವಣೆ ಬದುಕು ಹಾಗೂ ಭಾವನೆಗಳ ಮಧ್ಯದ ಚುನಾವಣೆ. 1 ಕೋಟಿ 10 ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಕೊಟ್ಟಿದ್ದೇವೆ. ಈ ಚುನಾವಣೆಯಲ್ಲಿ ಬದುಕು ಗೆಲ್ಲುತ್ತೆ. ಜನರಿಗೆ ಬೇಕಾಗಿರೋದು ಬದುಕು. ಕಾಂಗ್ರೆಸ್ ಅಂದರೆ ಬದುಕು, ಬಿಜೆಪಿ ಅಂದರೆ ಭಾವನೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಲೋಕಸಭೆ ಚುನಾವಣೆ: ಶೆಟ್ಟರ್‌ಗೆ ಕಾಂಗ್ರೆಸ್ ಟಿಕೆಟ್? ಸಿಎಂ ಪ್ರತಿಕ್ರಿಯೆ ಹೀಗಿದೆ