ಬೆಂಗಳೂರು : ಉಪ ಚುನಾವಣೆಯಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ. ಗೆಲ್ಲುವುದಕ್ಕೆ ಕಾರಣವಿದ್ದಂತೆ ಸೋಲಿಗೂ ಕಾರಣವಿದೆ. ಉಪ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಭ್ಯರ್ಥಿಯನ್ನು ಕೊನೆಗಳಿಗೆಯಲ್ಲಿ ತೀರ್ಮಾನ ಮಾಡಿದ್ದೆವು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹೆಚ್. ಡಿ ಕುಮಾರಸ್ವಾಮಿ ಇಬ್ಬರೂ ತಮ್ಮ ಮಕ್ಕಳನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದಿದ್ದರು. ಅದೂ ಕೂಡ ಮೈನಸ್ ಪಾಯಿಂಟ್ ಆಯಿತು. ಸಂಡೂರಿನಲ್ಲಿ ಉತ್ತಮ ಫೈಟ್ ಕೊಟ್ಟಿದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರ, ಗ್ಯಾರಂಟಿ ವೈಫಲ್ಯ ಆರೋಪ ಇದ್ದರೂ ಜನ ಬೆಂಬಲ ಅವರಿಗೆ ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ನ ಪಾಪದ ಕೊಡ ತುಂಬಿಲ್ಲ. ಪಾಪದ ಕೊಡ ತುಂಬಲಿ, ಅವನತಿಗೆ ಹೋಗುತ್ತದೆ. ಇದು ಸಿಎಂ ಸಿದ್ದರಾಮಯ್ಯ ಅವರ ಗೆಲುವೂ ಅಲ್ಲ, ಡಿಸಿಎಂ ಡಿ. ಕೆ ಶಿವಕುಮಾರ್ ಗೆಲುವೂ ಅಲ್ಲ. ಇದು ಕಾಂಚಾಣದ ಗೆಲುವು ಎಂದು ಕಿಡಿಕಾರಿದರು.
ಸೋಲನ್ನೇ ಗೆಲುವಾಗಿಸುವ ಶಕ್ತಿ ನಮಗಿದೆ: ಕಾಂಗ್ರೆಸ್ನ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ. ಈ ಗೆಲುವಿನಿಂದ ಕಾಂಗ್ರೆಸ್ಗೆ ಕಿರೀಟ ಬಂದಿಲ್ಲ. ಹಣ, ಅಧಿಕಾರ ದುರ್ಬಳಕೆ ಮಾಡಿ ಗೆದ್ದಿದ್ದಾರೆ. ಇದರಲ್ಲಿ ಕಾಂಗ್ರೆಸ್ನ ಚಮತ್ಕಾರ ಏನೂ ಇಲ್ಲ. ಚುನಾವಣಾ ತಯಾರಿಯನ್ನ ನಾವು ಇನ್ನಷ್ಟು ಬೇಗ ಮಾಡಬೇಕಿತ್ತು. ಎಲ್ಲವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಎದೆಗುಂದುವುದು ಬೇಡ. ಸೋಲನ್ನೇ ಗೆಲುವಾಗಿಸುವ ಶಕ್ತಿ ನಮಗಿದೆ. ಅಟಲ್ ಬಿಹಾರಿ ವಾಜಪೇಯಿ ಹೇಳಿದಂತೆ ನಾವು ಪಲಾಯನ ಮಾಡುವುದಿಲ್ಲ ಎಂದು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರಿಗೆ ಅದೃಷ್ಟವಿಲ್ಲವೆಂದು ಎನಿಸುತ್ತದೆ. ನಿಖಿಲ್ ಅರ್ಜುನನ ಪಾತ್ರ ಮಾಡುತ್ತಾರೆ ಅಂತ ಅಂದುಕೊಂಡಿದ್ದೆವು. ಆದರೆ, ಮತ್ತೆ ಜನ ಅವರಿಗೆ ಅಭಿಮನ್ಯುವಿನ ಪಾತ್ರ ಕೊಟ್ಟಿದ್ದಾರೆ. ಎರಡು ಬಾರಿ ಸೋತರೂ ಈ ಬಾರಿ ಗೆಲ್ಲುತ್ತಾರೆ ಎಂದು ಭಾವಿಸಿದ್ದೆವು. ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಅಭಿವೃದ್ಧಿ ಕಾರ್ಯಕ್ಕೆ ಸಮಸ್ಯೆ ಆಗುತ್ತದೆಂದು ಜನ ಆಡಳಿತ ಪಕ್ಷದ ಪರ ವೋಟ್ ಮಾಡಿದ್ದಾರೆ. ಸೋಲೇ ಗೆಲುವಿಗೆ ಹಾದಿ. ಸೋಲು ಸ್ವೀಕರಿಸಿದ್ದೇವೆ, ಗೆಲುವಿನ ಕಡೆ ಹೋಗುತ್ತೇವೆ ಎಂದು ತಿಳಿಸಿದರು.
ಪಕ್ಷವನ್ನ ಇನ್ನಷ್ಟು ಸದೃಢ ಮಾಡುತ್ತೇವೆ : ಮಹಾರಾಷ್ಟ್ರದಲ್ಲಿ ಮೆಜಾರಿಟಿಯಲ್ಲಿ ಗೆದ್ದಿದ್ದೇವೆ. ಜಾರ್ಖಂಡ್ನಲ್ಲಿ ಕಳೆದ ಬಾರಿಗಿಂತ ಉತ್ತಮವಾಗಿದೆ. ಅಲ್ಲೂ ಗೆಲ್ಲಬೇಕಿತ್ತು. ಜನರ ತೀರ್ಪನ್ನ ಶಿರಸಾವಹಿಸಿ ಸ್ವೀಕರಿಸುತ್ತೇವೆ. ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ. ಪಕ್ಷವನ್ನ ಇನ್ನಷ್ಟು ಸದೃಢ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ಜನರ ತೀರ್ಪನ್ನ ಸ್ವಾಗತಿಸುತ್ತೇವೆ. ರಾಜ್ಯದಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಶ್ರಮವಹಿಸಿದ್ದಾರೆ. ಸರ್ಕಾರದಿಂದ ಅಧಿಕಾರ, ಹಣ ದುರುಪಯೋಗ ಆಗಿದೆ. ತುಷ್ಟೀಕರಣದ ಪರಾಕಾಷ್ಠೆ ತಲುಪಿ ಒಂದು ವರ್ಗದ ಮತ ಸಂಪೂರ್ಣ ಅವರಿಗೆ ಸಿಕ್ಕಿದೆ ಎಂದು ಹೇಳಿದರು.
ಗಣೇಶ ಹಬ್ಬದ ವೇಳೆಯೂ ಸರ್ಕಾರ ಅದೇ ರೀತಿ ನಡೆದುಕೊಂಡಿದೆ. ಒಂದು ವರ್ಗದ ತುಷ್ಟೀಕರಣದಿಂದ ಮತಗಳ ಕ್ರೂಢೀಕರಣದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ನಾವು ಜನರಿಗೆ ಅರಿವು ಮೂಡಿಸಲು ಸಾಧ್ಯವಾಗಿಲ್ಲ. ಶೇ.11-15 ರಷ್ಟು ಒಂದು ವರ್ಗ ಕಾಂಗ್ರೆಸ್ಗೆ ಸಾಲಿಡ್ ವೋಟ್ ಮಾಡಿದೆ. ಅದಾಗ್ಯೂ ಅವರು ಗೆದ್ದಿದ್ದು 2-3 ವೋಟ್ನಲ್ಲಿ. ಪ್ರತಿ ಗ್ರಾಮ ಪಂಚಾಯತಿಯನ್ನು ವಹಿಸಿ ಸಚಿವರಿಗೆ ಟಾರ್ಗೆಟ್ ನೀಡಿ, ಲೀಡ್ ರೀಚ್ ಆಗದಿದ್ದರೆ ಸಚಿವ ಸ್ಥಾನವೇ ಹೋಗುತ್ತದೆ ಎಂದರು.
ಆಡಳಿತ ಯಂತ್ರ ಸರ್ಕಾರದ ಪರವಾಗಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಜನರಿಂದ ಕಿತ್ತು ಜನರಿಗೆ ಕೊಡುವ ಗ್ಯಾರಂಟಿ. ಮನೆಯಿಂದ 4 ಸಾವಿರ ಕಿತ್ತು, 2 ಸಾವಿರ ಹಾಕಿದ್ರು. ಇದೆಲ್ಲ ಬಿಜೆಪಿ ಸೋಲಿಗೆ ಕಾರಣ ಎಂದು ದೂರಿದರು. ಇದು ಸರ್ಕಾರದ ವಿರುದ್ದ ಜನಾಕ್ರೋಶ ಇದೆ ಎನ್ನುವುದನ್ನ ತೋರಿಸುತ್ತದೆ. ಸಂಡೂರಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ. ವಾಲ್ಮೀಕಿ ನಿಗಮದ ಅಕ್ರಮ, ಜನರ ಮನಸ್ಸು ತಟ್ಟುತ್ತದೆ ಅಂದ್ಕೊಂಡಿದ್ದೆವು . ಅದು ಆಗಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದ ಮೂರು ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿರಾಸೆ ತಂದಿದೆ : ಬಿ ವೈ ವಿಜಯೇಂದ್ರ