ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಸಿ.ಎ ನಿವೇಶನ ಮಂಜೂರು ಮಾಡಲು ಅದೊಂದೇ ಕುಟುಂಬ ಎಸ್ಸಿ, ಎಸ್ಟಿಗೆ ಸೇರಿದೆಯಾ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇದು ಮತ್ತೊಂದು ಮುಡಾ ಕೇಸ್ ಆಗಲಿದೆ. ಆ ಸಿ.ಎ ನಿವೇಶನಕ್ಕೆ ಜಾಗ ಬೇಕು ಅಂತ ಅನೇಕರು ಅರ್ಜಿ ಹಾಕಿದ್ದಾರೆ. ಈ ಬಗ್ಗೆ ನಾನು ನಾಳೆ ಸಂಪೂರ್ಣ ದಾಖಲೆ ಇಟ್ಟು ಮಾತಾಡುತ್ತೇನೆ. ನಾನು ಹಿಟ್ ಅಂಡ್ ರನ್ ಮಾಡೋದಿಲ್ಲ ಎಂದರು.
ಸಿ.ಎ ಸೈಟ್‌ಗಳನ್ನು ಆಸ್ಪತ್ರೆ, ಪೋಸ್ಟ್ ಆಫೀಸ್, ಶಾಲೆ ನಿರ್ಮಾಣ ಹೀಗೆ ಮೊದಲೇ ನಿರ್ಧಾರ ಆಗಿರಲಿದೆ. ವ್ಯಕ್ತಿಗಾಗಿ ಕೊಡೋದಿಲ್ಲ, ಟ್ರಸ್ಟ್‌ಗೆ ಮಾತ್ರ ಕೊಡೋದು. ಒಂದು ಮನೆಗೆ ಸೀಮಿತವಾಗಿ ಟ್ರಸ್ಟ್ ಇದೆ. ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ಇವರ ಹೆಸರಲ್ಲಿದೆ. ಕಲಬುರಗಿಯಲ್ಲಿ ಇದು ರಿಜಿಸ್ಟರ್ ಆಗಿದೆ. ದಲಿತರು ಅಂದ್ರೆ ಒಂದೇ ಒಂದು ಕುಟುಂಬ ಅಲ್ಲ. ಅನೇಕ ದಲಿತ ಕುಟುಂಬಗಳು ಕೂಡ ಇವೆ. ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ಕೊಟ್ಟಿದ್ದಾರೆ. ಅದು ಏರೋಸ್ಪೇಸ್ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಇತರೆ ಟ್ರಸ್ಟ್‌ಗೂ ಅರ್ಧ ಎಕರೆ ಸಿಕ್ಕಿದ್ರೂ ಅನುಕೂಲ ಆಗ್ತಿತ್ತು. ಇದು ನಂಬಿಕೆಯ ಪ್ರಶ್ನೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ತಮ್ಮ ಸಂಕಷ್ಟಕ್ಕೆ ಕಾವಿದಾರಿಗಳನ್ನೂ ಬಳಸಿಕೊಳ್ತಿದ್ದಾರೆ: ಸಿದ್ದರಾಮಯ್ಯ ಅವರು ಜಾತ್ಯತೀತ ಅಂತಾರೆ. ಅವರು ಎಲ್ಲಿ ಜಾತ್ಯತೀತ ನಿಲುವು ಉಳಿಸಿಕೊಂಡಿದ್ದಾರೆ ಅನ್ನೋದನ್ನು ಅವರೇ ಹೇಳಬೇಕು. ಕಾವಿದಾರಿಗಳನ್ನು ಕಂಡ್ರೆ ಆಗ್ತಿರಲಿಲ್ಲ. ಈಗ ತಮ್ಮ ಸಂಕಷ್ಟಕ್ಕೆ ಕಾವಿದಾರಿಗಳನ್ನೂ ಬಳಸಿಕೊಳ್ತಿದ್ದಾರೆ. ನಮಗೆ ಗುರುಗಳು, ಮಠಾಧೀಶರ ಮೇಲೆ ಗೌರವ ಇದೆ. ಅವರು ರಾಜಕಾರಣ ತೊಳೆಯುವ ಕೆಲಸ ಮಾಡಬೇಕೇ ಹೊರತು, ಭ್ರಷ್ಟಾಚಾರ ಮಾಡಿದವರ ಸಪೋರ್ಟ್ ಮಾಡೋದು ಎಷ್ಟು ಸರಿ?. ಈ ಸರ್ಕಾರ ಮುಡಾದಲ್ಲಿ ಭ್ರಷ್ಟಾಚಾರ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ ಕೂಡ ಭ್ರಷ್ಟಾಚಾರ ಆಗಿದೆ ತನಿಖೆ ನಡೆಯುತ್ತಿದೆ. ದಲಿತ ಸಮುದಾಯಕ್ಕೆ ಅನ್ಯಾಯ ಆದಾಗ ಜನರ ಬೆಂಬಲಕ್ಕೆ ನಿಲ್ಲಬೇಕು. ಅದು ಬಿಟ್ಟು ದಲಿತ ವರ್ಗಕ್ಕೆ ಅನ್ಯಾಯ ಮಾಡಿದವರ ಸಪೋರ್ಟ್‌ಗೆ ನಿಲ್ಲೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಯಾವುದೋ ಆಮಿಷಕ್ಕೆ ಒಳಗಾಗಿರಬೇಕು: ದಲಿತ ಸಂಘಟನೆ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಹುಚ್ಚಾಟಕ್ಕೆ ಬಲಿಯಾಗಿದ್ದಾರೆ. ಸರ್ಕಾರದ ಪರವಾಗಿ ಪ್ರತಿಭಟನೆ ಮಾಡಿದ್ರೆ, ಇಲ್ಲಿ ಯಾವುದೋ ಆಮಿಷಕ್ಕೆ ಒಳಗಾಗಿದ್ದಾರೆ ಅನ್ನಿಸುತ್ತೆ. ಸರ್ಕಾರದ ಪರವಾಗಿ ಪ್ರತಿಭಟನೆ ಮಾಡಲು ನೀವೇನು ರಾಜಕಾರಣಿಯಾ?. ದಲಿತರ ಪರವಾಗಿ ಪ್ರತಿಭಟನೆ ಮಾಡಿ. ತಳವರ್ಗಕ್ಕೆ ಮೋಸ ಅನ್ಯಾಯ ಮಾಡಿದಾಗ ಅದರ ವಿರುದ್ಧ ಪ್ರತಿಭಟನೆ ಮಾಡಬೇಕು. ದಲಿತರಿಗೆ ಮೀಸಲಿಟ್ಟ ಹಣವನ್ನು ಸರ್ಕಾರ ನುಂಗಿದೆ, ಹೀಗಿದ್ದರೂ ಸರ್ಕಾರ ಪರವಾಗಿ ಪ್ರತಿಭಟನೆ ಮಾಡಬೇಕಾ ಎಂದು ಕೇಳಿದರು.
ಸಿಎಂ ಪರ ಆಗಲಿ, ಯಾರ ಪರ ಯಾರಾದ್ರೂ ನಿಲ್ಲಲಿ. ಸರ್ಕಾರ ದಲಿತರಿಗೆ ಸವಲತ್ತು ನೀಡದೇ ಇದ್ದಾಗ ಹೋರಾಟ ಮಾಡಲಿ. 24 ಸಾವಿರ ಕೋಟಿ ವರ್ಗಾವಣೆ ಆಗಿದೆ. 187 ಕೋಟಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಅದನ್ನ ವಿರೋಧ ಮಾಡ್ತಿಲ್ಲ, ಪರ ನಿಲ್ತಿದ್ದಾರೆ. ಹೊಟ್ಟೆಪಾಡಿಗಾಗಿ ಕೆಲ ಸಂಘಟನೆಗಳು ನಿಲ್ತಿವೆ ಅನ್ನೋದು ಸ್ಪಷ್ಟವಾಗಲಿದೆ. ಹರಿರಾಮ್ ಹೇಳಿದಂತೆ ಆಗಲಿದೆ ಎಂದರು.