ರಾಯಚೂರು: "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 15 ರಿಂದ 16 ತಿಂಗಳು ಕಳೆದಿವೆ. ಆದರೆ, ಕತ್ತರಿ ಮತ್ತು ಟೇಪ್ಗಳು ಖರ್ಚಾಗಿಲ್ಲವೆಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರ ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ರಾಯಚೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಅಭಿವೃದ್ಧಿ ಕಾಮಗಾರಿಗೆ ಉದ್ಘಾಟನೆ ಮಾಡಿದ ಕತ್ತರಿಗೆ ತುಕ್ಕು ಹಿಡಿಯುವ ಪರಿಸ್ಥಿತಿ ಬಂದಿದೆ. ಇನ್ನು ಎಷ್ಟು ದಿನದಲ್ಲಿ ಕತ್ತರಿಗೆ ಕೆಲಸ ಕೊಡುತ್ತೀರಿ ಅಂತ ಜನರಿಗೆ ಹೇಳಿ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 15 ರಿಂದ 16 ತಿಂಗಳು ಕಳೆದರೂ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ" ಎಂದು ಟೀಕೆ ಮಾಡಿದರು.
"ಮೂಡಾ ಒಂದೇ ಅಲ್ಲ ಎಲ್ಲ ಹಗರಣಗಳು ಸೇರಿದಂತೆ ಎಲ್ಲ ವಿಚಾರಗಳನ್ನು ಇಟ್ಟುಕೊಂಡು ದಲಿತರಿಗೆ ನ್ಯಾಯ ಕೊಡಿಸಬೇಕು, ಅವರ ಪರವಾಗಿ ನಿಲ್ಲಬೇಕು ಎನ್ನುವುದು ಭಾರತೀಯ ಜನತಾ ಪಕ್ಷದ ಅಭಿಲಾಷೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಾವು ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತು ಈ ಬಾರಿ ಸದನದಲ್ಲಿ ಅವರಿಗೆ ಬೆವರು ಇಳಿಸುವ ಕೆಲಸ ಮಾಡುತ್ತೇವೆ. ಆಗಸ್ಟ್ ಮೂರನೇ ತಾರೀಖಿನಿಂದ ನಮ್ಮ ಪಾದಯಾತ್ರೆ ನಡೆಯುತ್ತದೆ. ಪಾದಯಾತ್ರೆ ಮುಗಿಯುವವರೆಗೆ ಈ ಸರ್ಕಾರ ಇರುತ್ತದೆ. ಅದಾದ ಬಳಿಕ ಈ ಸರ್ಕಾರ ಹೋಗಬಹುದು ಎಂಬ ಅನುಮಾನ ವ್ಯಕ್ತಪಡಿಸಲು ನಾನು ಬಯಸುತ್ತೇನೆ" ಎಂದರು.
'ದಲಿತರ ಚರ್ಮದಲ್ಲಿ ಸಿಎಂ ಚಪ್ಪಲಿ'- ಛಲವಾದಿ ನಾರಾಯಣಸ್ವಾಮಿ : "ಬಸ್ನಲ್ಲಿ ಹೆಣ್ಣು ಮಕ್ಕಳಿಗೆ ಫ್ರೀ ಯೋಜನೆ ನೀಡಿದರು. ಆದರೆ ದಲಿತರ ಹೆಣ್ಣು ಮಕ್ಕಳು ದಿನಾ ಬಸ್ನಲ್ಲಿ ಹೋಗುತ್ತಾರಾ? ಬೆಳಗ್ಗೆಯಿಂದ ಸಂಜೆವರೆಗೆ ಕೂಲಿ ಮಾಡಿದರೆ ಉಂಟು, ಇಲ್ಲವಾದರೆ ಇಲ್ಲ. ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ. ದಲಿತರ ನಂಬಿಕೆಗೆ ದ್ರೋಹ ಮಾಡಿ, ವಂಚನೆ ಮಾಡಿ, ಆ ನಂಬಿದ ಜನರ ಚರ್ಮ ತೆಗೆದು ಚಪ್ಪಲಿ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ವಿಜೃಂಭಿಸುತ್ತಿದ್ದಾರೆ. ಇದು ನಾನು ನೇರವಾಗಿ ಅವರ ಮೇಲೆ ಮಾಡುವ ಆಪಾದನೆ" ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.