ಮೈಸೂರು: ಚಿರತೆ ಹಾವಳಿಯನ್ನು ತಪ್ಪಿಸಲು ರಚಿಸಲಾದ ಚಿರತೆ ಸೆರೆ ಕಾರ್ಯಪಡೆ ಕಳೆದ ಒಂದು ವರ್ಷದಿಂದ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ ಒಟ್ಟು 77 ಚಿರತೆಗಳನ್ನು ಸೆರೆ ಹಿಡಿದಿದೆ. ಜೊತೆಗೆ 14 ಚಿರತೆ ಮರಿಗಳನ್ನು ರಕ್ಷಣೆ ಮಾಡಿರುವುದು ವಿಶೇಷವಾಗಿದೆ.
77 ಚಿರತೆ, 14 ಮರಿಗಳ ರಕ್ಷಣೆ: ಹಳೇ ಮೈಸೂರು ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಟಿ.ನರಸೀಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮೂರು ಜನರನ್ನು ಬಲಿ ಪಡೆದಿತ್ತು. ಈ ಚಿರತೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ 2023ರ ಫೆಬ್ರವರಿಯಲ್ಲಿ ಚಿರತೆ ಸೆರೆ ಕಾರ್ಯಪಡೆ ಅಂದರೆ ಲೆಪರ್ಡ್ ಟಾಸ್ಕ್ ಫೋರ್ಸ್ ರಚಿಸಿತು. ಹಳೇ ಮೈಸೂರು ಭಾಗದ ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಈ ತಂಡ ಯಶಸ್ವಿಯಾಗಿ ಕಳೆದ ಒಂದು ವರ್ಷದಲ್ಲಿ ಕಾರ್ಯಾಚರಣೆ ನಡೆಸಿ 77ಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿದಿದೆ. ಕಾರ್ಯಪಡೆ ಸೆರೆ ಹಿಡಿದ ಚಿರತೆಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಕಬ್ಬಿನ ಗದ್ದೆಗಳಲ್ಲಿ ಸಿಕ್ಕ ಚಿರತೆ ಮರಿಗಳನ್ನು ತಾಯಿಯ ಮಡಿಲಿಗೆ ಸೇರಿಸುವ ಕೆಲಸವನ್ನು ಈ ಪಡೆ ಮಾಡಿದೆ.
ಪ್ರಮುಖವಾಗಿ ಮೈಸೂರು ತಾಲ್ಲೂಕಿನಲ್ಲಿ 34, ಟಿ. ನರಸೀಪುರ ತಾಲ್ಲೂಕಿನಲ್ಲಿ 18, ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ 9, ನಂಜನಗೂಡಿನಲ್ಲಿ 2, ಕೆಆರ್ ನಗರದಲ್ಲಿ 5, ಹುಣಸೂರಿನಲ್ಲಿ 1, ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನಲ್ಲಿ 2, ಕೆಆರ್ ಪೇಟೆ ತಾಲ್ಲೂಕಿನಲ್ಲಿ 3, ಮದ್ದೂರು, ಪಾಂಡವಪುರ ಹಾಗೂ ಚನ್ನಪಟ್ಟಣದಲ್ಲಿ ಒಂದೊಂದು ಚಿರತೆಗಳನ್ನು ರಕ್ಷಣೆ ಮಾಡಲಾಗಿದೆ. ಚಿರತೆ ಉಪಟಳಕ್ಕೆ ಸಂಬಂಧಿಸಿದಂತೆ ಮೈಸೂರು ವಿಭಾಗದಿಂದ ಇಲ್ಲಿಯವರೆಗೆ 934 ದೂರುಗಳು ಎಲ್‌ಟಿಎಫ್ ತಂಡಕ್ಕೆ ಬಂದಿವೆ.
ಟಾಸ್ಕ್ ಫೋರ್ಸ್ನಲ್ಲಿ ನುರಿತ ಸಿಬ್ಬಂದಿ: ಟಾಸ್ಕ್ ಫೋರ್ಸ್ಗೆ ನುರಿತ ಸಿಬ್ಬಂದಿಯಿಂದ ತಂಡವನ್ನು ರಚಿಸಲಾಗಿದ್ದು, ಜೊತೆಗೆ ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಈ ಚಿರತೆ ಕಾರ್ಯಪಡೆಯಲ್ಲಿ ಒಬ್ಬರು ಡಿಸಿಎಫ್, ಒಬ್ಬರು ಎಸಿಎಫ್, ಒಬ್ಬರು ಆರ್ಎಫ್ಒ, ನಾಲ್ವರು ಡಿಆರ್ಎಫ್ಓಗಳು ಇದ್ದಾರೆ. ಇವರ ಜೊತೆಗೆ 8 ಮಂದಿ ಗಸ್ತು ಅರಣ್ಯ ಪಾಲಕರು, 45 ಜನ ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಿರತೆ ಟಾಸ್ಕ್ ಫೋರ್ಸ್ ಬಳಿ ಇರುವ ವಿಶೇಷ ಪರಿಕರಗಳೇನು?: ಚಿರತೆ ಸೆರೆ ಕಾರ್ಯಾಚರಣೆಗೆ ಫೋರ್ಸ್ ವಿಶೇಷ ಪರಿಕರಗಳನ್ನು ಹೊಂದಿದೆ. ಬಾಡಿ ಪ್ರೊಟೆಕ್ಟರ್, ಶೀಲ್ಡ್, ಲಾಟಿ, ಬಲೆ, ಸ್ಮಾರ್ಟ್ ಸ್ಟಿಕ್, ಪಿಟಿಝಡ್, ಜಿಎಸ್‌ಎಂ, -ಸೆನ್ಸಾರ್ ಕ್ಯಾಮರಾ, ಮೈಕ್ರೋ ಚಿಪ್ ಸ್ಕ್ಯಾನರ್, ಪೆನ್ ಕೇಜ್, ಕಬ್ ಕೇಜ್, ಡ್ರೋನ್, ಎಲಿವೇಟ್ ಸ್ಟ್ಯಾಂಡ್, ವನ್ಯಜೀವಿ ಆಂಬ್ಯುಲೆನ್ಸ್, ಬಂಕರ್ ನೆಟ್, ಅರವಳಿಕೆ ಮದ್ದು, ಅರವಳಿಕೆ ಮದ್ದು ಪ್ರಯೋಗದ ಗನ್, ವಾಕಿ, ಬಾಡಿವೋರ್ನ್ ಕ್ಯಾಮರಾ, ಕೇಜ್‌ಗಳು ಸೇರಿದಂತೆ ಅಗತ್ಯ ಪರಿಕರಗಳು ಈ ಫೋರ್ಸ್ನಲ್ಲಿವೆ.
ಸಹಾಯವಾಣಿ: ಚಿರತೆ ಹಾವಳಿ ಕುರಿತಂತೆ ದೂರು ಸಲ್ಲಿಸಲು ಅರಣ್ಯ ಇಲಾಖೆ ಸಹಾಯವಾಣಿಯನ್ನು ಸಹ ತೆರೆದಿದ್ದು, 9481996026 ಮೊಬೈಲ್ ಸಂಖ್ಯೆಗೆ ದೂರು ನೀಡಬಹುದಾಗಿದೆ. ದೂರು ನೀಡುವ ವೇಳೆ ಲೊಕೇಷನ್ ಹಾಕಿದರೆ ಸಕಾಲಕ್ಕೆ ಕಾರ್ಯಪಡೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಾರೆ.
ಡಿಸಿಎಫ್ ಕೆ.ಎನ್. ಬಸವರಾಜ್ ಹೇಳುವುದೇನು?: ಡಿಸಿಎಫ್ ಬಸವರಾಜ್ ಈ ಬಗ್ಗೆ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದು, "ಬೀದಿನಾಯಿಗಳೇ ಚಿರತೆಗಳ ನೆಚ್ಚಿನ ಬೇಟೆಯಾಗಿವೆ. ಇತ್ತೀಚೆಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮುಖ್ಯವಾಗಿ ಕೋಳಿ ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ರಸ್ತೆ ಬದಿ ಸುರಿಯುತ್ತಿರುವುದರಿಂದ ಬೀದಿನಾಯಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಾಯಿಗಳ ಬೇಟೆಗೆ ಚಿರತೆಗಳು ಜನವಸತಿ ಪ್ರದೇಶದ ಕಡೆ ಬರುತ್ತಿವೆ. ಮಾಂಸದ ಅಂಗಡಿಗಳ ತ್ಯಾಜ್ಯ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ಮಾಡಲು ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಾಳುಬಿದ್ದ ಭೂಮಿ ಹಾಗೂ ನಿವೇಶನಗಳಲ್ಲಿ ಗಿಡಗಂಟೆ ತೆರವುಗೊಳಿಸಬೇಕು. ಸಕಾಲಕ್ಕೆ ಕಬ್ಬು ಕಟಾವು ಮಾಡದಿರುವುದು. ಗ್ರಾಮೀಣ ಪ್ರದೇಶದಲ್ಲಿ ಬೀದಿದೀಪದ ಅವ್ಯವಸ್ಥೆ ಚಿರತೆ ಹಾವಳಿ ಹೆಚ್ಚಾಗಲು ಕಾರಣ. ಒಂದು ವರ್ಷದಲ್ಲಿ ಚಿರತೆ ಕಾರ್ಯಪಡೆ ಹಲವು ಸವಾಲುಗಳನ್ನು ಎದುರಿಸಿ 77 ಚಿರತೆಗಳನ್ನು ರಕ್ಷಿಸಿ, ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟಿದೆ. 5 ಕಡೆ ಸಿಕ್ಕಿದ್ದ 14 ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿರುವುದು ಎಲ್‌ಟಿಎಫ್ ತಂಡದ ಸಾಧನೆ. ಕಳೆದ ವರ್ಷ 60 ಚಿರತೆಗಳನ್ನು ರಕ್ಷಿಸಲಾಗಿತ್ತು. ಸಾರ್ವಜನಿಕರಿಂದ ದೂರು ಬಂದ ಕೂಡಲೇ ಸ್ಥಳಕ್ಕೆ ಎಲ್‌ಟಿಎಫ್ ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ" ತಿಳಿಸಿದರು.
ಇದನ್ನೂ ಓದಿ: ಒಂದೇ ದಿನ ಎರಡು ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು