ಮಂಗಳೂರು: ಉಡುಪಿ ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಆತಂಕ ಸೃಷ್ಟಿಸಿದ್ದು, ಉಡುಪಿ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿ, ''ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ನೆಲ್ಲಿಕಾರಿನಲ್ಲಿ ವ್ಯಕ್ತಿಯೊಬ್ಬರಿಗೆ ವಾಂತಿ, ಭೇದಿ ಪ್ರಕರಣ ಕಂಡು ಬಂದಿತ್ತು. ಆರೋಗ್ಯ ಇಲಾಖೆಯ ತಂಡ ಪರಿಶೀಲನೆ ನಡೆಸಿದಾಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದುವಿನಲ್ಲಿ ಕಾಲರಾ ಇರುವುದು ಪತ್ತೆಯಾಗಿತ್ತು. ವ್ಯಕ್ತಿಯ ಮಲದ ಮಾದರಿ ಪರೀಕ್ಷೆ ನಡೆಸಿದಾಗ ಕಾಲರಾ ಪತ್ತೆಯಾಗಿತ್ತು. ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ'' ಎಂದು ತಿಳಿಸಿದರು.
''ವ್ಯಕ್ತಿಯು ಹೊಸ್ಮಾರು ಎಂಬಲ್ಲಿ ಹೋಟೆಲ್ವೊಂದರ ಆಹಾರ ಸೇವಿಸಿ ಕಾಲರಾ ಹರಡಲು ಕಾರಣವಾಗಿತ್ತು. ಇದೇ ಹೋಟೆಲ್ನ ಆಹಾರ ಸೇವಿಸಿದ ಉಡುಪಿ ಜಿಲ್ಲೆಯ ಕೆಲವರಿಗೆ ಸೋಂಕು ಹರಡಿತ್ತು. ಸೋಂಕಿನ ಮೂಲವಿದ್ದ ಹೋಟೆಲ್ನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ'' ಎಂದರು.
126 ಹೆಚ್1ಎನ್1 ಪ್ರಕರಣ: ''ಹೆಚ್1ಎನ್1 ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಈ ವರ್ಷ 126 ಹೆಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ ಮಾಹಿತಿ ನೀಡಿದರು.
ಇದನ್ನೂ ಓದಿ: ಉಡುಪಿಯಲ್ಲಿ ಕಾಲರಾ ಭೀತಿ: ಸೋಂಕಿನಿಂದ ದೂರವಿರಲು ಸಾರ್ವಜನಿಕರಿಗೆ ಟಿಪ್ಸ್ ನೀಡಿದ ಡಿಸಿ - Cholera Cases