ದಾವಣಗೆರೆ: ಮರದಿಂದ ತೆಂಗಿನಕಾಯಿ ಕೀಳಲು ಹೆಚ್ಚಿನ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿರುವ ಘಟನೆ ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.8ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಜು (26) ಎಂಬಾತ ವೃದ್ಧೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ.
ಘಟನೆಯ ವಿವರ: ಸಂತ್ರಸ್ತ ವೃದ್ಧೆ ಆರೋಪಿ ರಾಜುಗೆ ತಮ್ಮ ಮನೆ ಮುಂದಿದ್ದ ತೆಂಗಿನ ಮರದಿಂದ ಕಾಯಿ ಕೀಳುವಂತೆ ಕೇಳಿಕೊಂಡಿದ್ದಳು. ಈ ವೇಳೆ ರಾಜು ಹಾಗೂ ಶಾಂತ ಎಂಬುವರಿಬ್ಬರು ಸೇರಿ ಕಾಯಿ ಇಳಿಸಿಕೊಟ್ಟಿದ್ದಾರೆ. ಇದಕ್ಕೆ ವೃದ್ಧೆ ಇಬ್ಬರಿಗೂ ತಲಾ 50 ರೂ. ಹಣ ನೀಡಿದ್ದರು. ಹಣ ಪಡೆದ ಬಳಿಕ ಯುವಕರು ಅಲ್ಲಿಂದ ತೆರಳಿದ್ದರು. ಆದರೆ, ಬಳಿಕ ಸಂಜೆ ವೇಳೆ ಮತ್ತೆ ವೃದ್ಧೆ ಮನೆಯತ್ತ ಬಂದ ಆರೋಪಿ ರಾಜು ತೆಂಗಿನಕಾಯಿ ಕಿತ್ತಿದ್ದಕ್ಕೆ ನನಗೆ ಇನ್ನೂ 100 ರೂ. ಕೊಡು ಎಂದು ಪಟ್ಟು ಹಿಡಿದಿದ್ದಾನೆ. ತಾನು ಹಣ ಕೊಡುವುದಿಲ್ಲ ಎಂದು ವೃದ್ಥೆ ಹೇಳಿದ್ದು, ಇದರಿಂದ ಕುಪಿತಗೊಂಡ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಿಕ್ಕು ತೋಚದ ವೃದ್ಧೆ ತನ್ನ ಮೊಮ್ಮಗಳಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅತ್ಯಾಚಾರ ಮಾಡಿದ ಆರೋಪಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತ ವೃದ್ಧೆ ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪಿಎಸ್ಐ ಪ್ರತಿಕ್ರಿಯೆ: ಈ ಬಗ್ಗೆ ಹದಡಿ ಠಾಣೆ ಪಿಎಸ್ಐ ಅಕ್ಬರ್ ಪ್ರತಿಕ್ರಿಯಿಸಿ, "ಘಟನೆ ಫೆಬ್ರವರಿ 08 ರಂದು ನಡೆದಿದೆ. ರಾಜು ಎಂಬ ಆರೋಪಿಯು 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ತೆಂಗಿನ ಕಾಯಿ ಕಿತ್ತಿದ್ದಕ್ಕೆ ಹೆಚ್ಚಿನ ಹಣ ಕೊಟ್ಟಿಲ್ಲ ಎಂದು ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತ ವೃದ್ದೆ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಅದರಂತೆ ಆರೋಪಿ ರಾಜುನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರವೆಸಗಿದ ಕೀಚಕ; ವಿಷ್ಯ ಬಹಿರಂಗಾಗುವ ಭಯದಲ್ಲಿ ಕತ್ತುಹಿಸುಕಿ ಕೊಂದ ಪಾಪಿ