ಶಿವಮೊಗ್ಗ: ನಗರದ ಮಾರುಕಟ್ಟೆಗೆ ಚೀನಾ ಬೆಳ್ಳುಳ್ಳಿ ಬಂದಿದೆ ಎಂಬ ಮಾಹಿತಿ ಆಧರಿಸಿ ಕೆಲ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಪಿಎಂಸಿ ತರಕಾರಿ ಮಾರುಕಟ್ಟೆ, ನಗರದ ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾದ ಏಳೆಂಟು ಅಂಗಡಿಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ತಂಡ ದಾಳಿ ಮಾಡಿ ಬೆಳ್ಳುಳ್ಳಿ ಸ್ಯಾಂಪಲ್ ಕಲೆ ಹಾಕಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದೆ.
ಈ ಕುರಿತು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಭಾರ ಅಧಿಕಾರಿ ಡಾ.ಹರೀಶ್ ಮಾತನಾಡಿ, "ಅಧಿಕಾರಿಗಳು ಚೀನಾ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಕೆಲ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 33 ಚೀಲ ಚೀನಾ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಕೆಲ ಸ್ಯಾಂಪಲ್ ತೆಗೆದುಕೊಂಡು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯ ಚೀನಾ ಬೆಳ್ಳುಳ್ಳಿ ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ" ಎಂದು ಮಾಹಿತಿ ನೀಡಿದರು.
ಸ್ಥಳೀಯರಾದ ಮನೋಹರ್ ಗೌಡ ಮಾತನಾಡಿ, "ನಾವು ಇಂದು ತಿನ್ನುವ ವಸ್ತುಗಳು ವಿಷವಾಗಿವೆ. ಚೀನಾದ ಬೆಳ್ಳುಳ್ಳಿ ಆರೋಗ್ಯಕ್ಕೆ ಹಾನಿಯಾಗುತ್ತದೆಯೇ ಅಥವಾ ಇಲ್ಲವೇ ಎಂದು ಲ್ಯಾಬ್ನಲ್ಲಿ ಪರೀಕ್ಷಿಸಬೇಕಿದೆ. ಈಗ ಬೆಳ್ಳುಳ್ಳಿ ಕೆ.ಜಿ 400 ರೂ ಇದೆ. ಆದರೆ, ಪಾನಿಪೂರಿ, ಗೋಬಿ ಅಂಗಡಿಗಳಿಗೆ ಬೆಳ್ಳುಳ್ಳಿ ಪೆಸ್ಟ್ ಮಾಡಿ ಕೇವಲ ಕೆ.ಜಿ 80 ರೂ ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ" ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ, ಶಿವಮೊಗ್ಗದಲ್ಲಿ ನೂತನ ಫುಡ್ ಪಾರ್ಕ್ ಸ್ಥಾಪನೆಗೆ ಸಚಿವ ಚಲುವರಾಯಸ್ವಾಮಿ ಸೂಚನೆ