ಹುಬ್ಬಳ್ಳಿ: ಬಸ್ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನ-ಬೆಳ್ಳಿ ಒಡವೆ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಭಟ್ಟೂರು ನಿವಾಸಿ ಮಹಾದೇವಿ ಜಗದೀಶ ಯಳವತ್ತಿ ಎಂಬುವರು ಮಂಗಳವಾರ ಮಧ್ಯಾಹ್ನ ತಮ್ಮ ಮಗುವಿನೊಂದಿಗೆ ಹುಬ್ಬಳ್ಳಿ ಗ್ರಾಮಾಂತರ 1ನೇ ಡಿಪೊ ಕೆಎ 42 ಎಫ್ 590 ಬಸ್ನಲ್ಲಿ ಹುಬ್ಬಳ್ಳಿಯಿಂದ ಗುಂಜಳಕ್ಕೆ ಪ್ರಯಾಣ ಮಾಡಿದ್ದಾರೆ. ತಮ್ಮ ಊರಿನ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಚಿನ್ನ, ಬೆಳ್ಳಿಯ ಒಡವೆಗಳು ಹಾಗೂ ನಗದು ಹಣವಿದ್ದ ಬ್ಯಾಗ್ ಅನ್ನು ಬಸ್ನಲ್ಲಿಯೇ ಮರೆತು ಹೋಗಿದ್ದಾರೆ. ಪ್ರಯಾಣಿಕರೆಲ್ಲ ಇಳಿದ ನಂತರ ಬಸ್ನ ನಿರ್ವಾಹಕ ಎಂ.ವಿ.ಹಿರೇಮಠ ಹಾಗೂ ಚಾಲಕ ಎಂ.ಎಚ್. ಪೀರಖಾನ್ ಅವರು ಬ್ಯಾಗ್ ಅನ್ನು ಗಮನಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮೇಲಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗ್ ಹಸ್ತಾಂತರ: ಘಟಕದಲ್ಲಿ ಮೇಲಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗ್ ತೆಗೆದು ನೋಡಲಾಗಿ ಅದರಲ್ಲಿ ಒಡವೆಗಳಾದ ಕಿವಿಯೋಲೆ, ಲಕ್ಷ್ಮೀ ತಾಳಿ, 8 ತಾಳಿ ಗುಂಡುಗಳು, ಉಂಗುರ, ಬುಗುಡಿ, ಮೂಗುತ್ತಿ ಮತ್ತು ಮಗುವಿನ ಕೈ ಖಡಗ, ಸರ, ಹಾಲ ಗಡಗ, ಉಂಗುರ ಹಾಗೂ ರೂ.220 ನಗದು ಹಣವಿರುವುದು ಗೊತ್ತಾಗಿದೆ. ಬ್ಯಾಗ್ನಲ್ಲಿದ್ದ ಆಧಾರ್ ಕಾರ್ಡ್ನಲ್ಲಿದ್ದ ದೂರವಾಣಿ ಸಂಖ್ಯೆಯ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ನಿರ್ವಾಹಕರ ಮೂಲಕ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಬ್ಯಾಗ್ ಸಿಕ್ಕ ಖುಷಿ, ಅಭಿನಂದನೆ ಸಲ್ಲಿಕೆ: ಒಡವೆ, ಹಣದ ಬ್ಯಾಗ್ ಮರಳಿ ಪಡೆದ ಪ್ರಯಾಣಿಕರಾದ ಮಹಾದೇವಿ ಹಾಗೂ ಅವರ ಪತಿ ಜಗದೀಶ ಮಾತನಾಡಿ, "ಮಗುವಿನೊಂದಿಗೆ ಮನೆಗೆ ಹೋಗುವ ಗಡಿಬಿಡಿಯಲ್ಲಿ ಬಸ್ನಲ್ಲಿ ಬ್ಯಾಗ್ ಬಿಟ್ಟು ಬಂದಿದ್ದು ನೆನಪಿರಲಿಲ್ಲ. ಆಯಾಸವಾಗಿದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದೆ. ಸಾರಿಗೆ ಡಿಪೊ ಸಿಬ್ಬಂದಿಯಿಂದ ದೂರವಾಣಿ ಕರೆ ಬಂದಾಗ ತಮಾಷೆಯ ಕರೆ ಎಂದು ಸುಮ್ಮನಾಗಿದ್ದೆ. ನಂತರ ಮನೆಯಲ್ಲಿ ಹುಡುಕಾಡಿದಾಗ ಬ್ಯಾಗ್ ಬಿಟ್ಟು ಬಂದುರುವುದು ಗೊತ್ತಾಗಿ ತುಂಬಾ ಗಾಬರಿಯಾಗಿತ್ತು. ಮತ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಕರೆ ಮಾಡಿ ಬ್ಯಾಗ್ ನನ್ನದೇ ಎಂದು ಖಚಿತಪಡಿಸಿದೆ. ಅಂದಾಜು ರೂ. 1 ಲಕ್ಷ 50 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಎಲ್ಲಾ ಒಡವೆಗಳು ಹಾಗೂ ಹಣದ ಸಹಿತ ಬ್ಯಾಗ್ನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕರು, ನಿರ್ವಾಹಕರು ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು" ಎಂದು ಭಾವುಕರಾದರು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, "ಪ್ರಾಮಾಣಿಕತೆ ಮೆರೆದ ನಿರ್ವಾಹಕ ಎಂ.ವಿ.ಹಿರೇಮಠ ಹಾಗೂ ಚಾಲಕ ಎಂ.ಎಚ್.ಪೀರಖಾನ್ ಅವರ ಕರ್ತವ್ಯ ಪರತೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗೂ ಇತರೆ ನೌಕರರಿಗೆ ಮಾದರಿಯಾಗಿದೆ" ಎಂದು ಶ್ಲಾಘಿಸಿದ್ದಾರೆ.
ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್.ಗುಡೆಣ್ಣವರ, ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪಿ.ವೈ.ಗಡಾದ, ಡಿಪೋ ಮ್ಯಾನೇಜರ್ ಬಿ.ಕೆ. ನಾಗರಾಜ ಮತ್ತು ಡಿಪೋ ಸಿಬ್ಬಂದಿ ಇದ್ದರು.
ಇದನ್ನೂ ಓದಿ: ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಮಗನಿಂದಲೇ ಕಿಡ್ನಿದಾನ: ರೋಬೋಟ್ ಸಹಾಯದಿಂದ ಯಶಸ್ವಿ ಕಸಿ