ಬೆಂಗಳೂರು: ನೀವೇನಾದರೂ ಟ್ರಾಫಿಕ್ ಸಿಗ್ನಲ್ ಬಳಿ ವಾಹನ ನಿಲ್ಲಿಸಿರುವಾಗ ಹಿಂಬದಿಯಿಂದ ಆಂಬ್ಯುಲೆನ್ಸ್ ಬಂದರೆ ದಾರಿ ಮಾಡಿಕೊಡಲು ಅಥವಾ ಸಿಗ್ನಲ್ ಜಂಪ್ ಮಾಡಿ ಮುಂದೆ ಹೋದರೆ ಅದನ್ನು ಮುಂದುವರೆಸಿ. ಸಂಚಾರ ನಿಯಮ ಉಲ್ಲಂಘನೆಯಾಗುತ್ತೆ ಅಂತಾ ಸಿಗ್ನಲ್ಗಳಲ್ಲಿ ವಾಹನ ನಿಲ್ಲಿಸಿಕೊಳ್ಳದಿರಿ. ಏಕೆಂದರೆ ಆಂಬ್ಯುಲೆನ್ಸ್ಗಳಿಗಾಗಿ ಟ್ರಾಫಿಕ್ ವೈಯಲೇಷನ್ ಮಾಡಿದರೂ ದಂಡ ಹಾಕುವುದಿಲ್ಲ ಎಂದು ಸಂಚಾರ ಪೊಲೀಸರು ಸ್ಪಷ್ಪಪಡಿಸಿದ್ದಾರೆ.
ಸಿಗ್ನಲ್ಗಳಲ್ಲಿ ವಾಹನ ನಿಂತಿರುವಾಗ ಆಂಬ್ಯುಲೆನ್ಸ್ ಬಂದರೆ ಮಾನವೀಯತೆ ಮೇರೆಗೆ ರೆಡ್ ಸಿಗ್ನಲ್ ಇದ್ದರೂ ಸವಾರರು ಸಿಗ್ನಲ್ ಜಂಪ್ ಮಾಡುತ್ತಾರೆ. ಇನ್ನೂ ಕೆಲ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದರೆ ಕೇಸ್ ಬೀಳುವ ಭಯದಿಂದಲೇ ಆಂಬ್ಯುಲೆನ್ಸ್ ದಾರಿಗೆ ಅಡ್ಡಿಯಾಗಲಿದ್ದಾರೆ. ಈ ಗೊಂದಲಗಳಿಗೆ ತೆರೆ ಎಳೆದಿರುವ ಸಂಚಾರ ಪೊಲೀಸರು ಆಂಬ್ಯುಲೆನ್ಸ್ ಬಂದಾಗ ಆದ್ಯತೆ ಮೇರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದರೂ ಪ್ರಕರಣ ದಾಖಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ವಾಹನಗಳ ಮೇಲೆ ಪ್ರಕರಣ ದಾಖಲಿಸಿ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದರೆ ದಂಡ ರಸೀದಿಯನ್ನ ಇನ್ ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ಬಂದು ತೋರಿಸಿದರೆ ಕೂಡಲೇ ಪ್ರಕರಣ ರದ್ದುಪಡಿಸುವುದಾಗಿ ಸಂಚಾರ ಪೊಲೀಸರು ಖಚಿತಪಡಿಸಿದ್ದಾರೆ.
ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಕೆ: ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೆ ಹೆಚ್ಚಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಟ್ರಾಫಿಕ್ನಲ್ಲಿ ಆಂಬ್ಯುಲೆನ್ಸ್ಗಳು ಸಿಲುಕಿ ರೋಗಿಗಳು ಪರಿಪಾಟಲು ಅನುಭವಿಸುವುದು ಸಾಮಾನ್ಯ ಎಂಬಂತಾಗಿದ್ದು ಇಂತಹ ಸಂಕಷ್ಟ ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಿಗೆ ಕ್ಷಿಪ್ರ ಗತಿಯಲ್ಲಿ ದಾರಿ ಮಾಡಿಕೊಡಲು ನಗರದ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲು ಚಿಂತನೆ ನಡೆಸಿದೆ. ಪ್ರಾಯೋಗಿಕವಾಗಿ ನಗರದ ಶೇಷಾದ್ರಿಪುರನಿಂದ ಕೆ.ಸಿ.ಜನರಲ್ ಆಸ್ಪತ್ರೆವರೆಗೂ ಜಂಕ್ಷನ್ಗಳಲ್ಲಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದ್ದು, ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ (ಟಿಎಂಸಿ) ನೊಂದಿಗೆ ಇಂಟರ್ ಲಿಂಕ್ ಮಾಡಿಸಿದರೆ ಸಿಗ್ನಲ್ ಬಳಿಯ 100 ಮೀಟರ್ ಸಮೀಪಕ್ಕೆ ಬಂದರೆ ಸ್ವಯಂಚಾಲಿತವಾಗಿ ಗ್ರೀನ್ ಸಿಗ್ನಲ್ ತೋರಿಸುತ್ತದೆ. ಇದರಿಂದ ಆಂಬ್ಯುಲೆನ್ಸ್‌ಗಳಿಗೆ ಸುಗಮವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ. ತುರ್ತು ಚಿಕಿತ್ಸೆ ಪಡೆಯುವ ರೋಗಿಗಳಿಗೆ ನೆರವಾಗಲಿದೆ.
ಉದ್ಯಾನ ನಗರಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ಸುಮಾರು 1.5 ಕೋಟಿ ವಾಹನಗಳು ದಿನನಿತ್ಯ ಸಂಚಾರ ನಡೆಸುತ್ತಿವೆ. ವಾಹನಗಳ ಸಂಖ್ಯೆ ಹೆಚ್ಚಾದಷ್ಟು ರಸ್ತೆ ಅಗಲೀಕರಣವಾಗಿಲ್ಲ. ಅಲ್ಲದೇ ವಿವಿಧ ಕಾಮಗಾರಿಗಳು ನಗರದಲ್ಲಿ ನಡೆಯುತ್ತಲೇ ಇರುತ್ತವೆ. ಕಿರಿದಾದ ರಸ್ತೆಗಳಲ್ಲಿ ತುರ್ತು ಚಿಕಿತ್ಸೆ ಪಡೆಯಲು ನಗರಕ್ಕೆ ಹೊರಜಿಲ್ಲೆಗಳಿಂದ ಆಂಬ್ಯುಲೆನ್ಸ್ಗಳಲ್ಲಿ ಬರುವ ರೋಗಿಗಳಿಗೆ ಗಂಟೆಗಟ್ಟಲೇ ರಸ್ತೆಯಲ್ಲಿ ಕಳೆಯಬೇಕಾದ ಅನಿವಾರ್ಯವಾಗಲಿದೆ. ಹೀಗಾಗಿ ತುರ್ತು ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಪ್ರಯಾಣ ಅವಧಿಯನ್ನ ತಗ್ಗಿಸಲು ಹಾಗೂ ಜಂಕ್ಷನ್ಗಳ ಬರುತ್ತಿದ್ದಂತೆ ದಾರಿ ಮಾಡಿಕೊಡಲು ಆಟೋಮೆಟಿಕ್ ಗ್ರೀನ್ ಸಿಗ್ನಲ್ ಸಹಾಯಕವಾಗಲಿದೆ.
ನಗರದಲ್ಲಿ ದಿನಕ್ಕೆ 3 ಸಾವಿರ ಆಂಬ್ಯುಲೆನ್ಸ್ಗಳು ಓಡಾಡುತ್ತವೆ. ಏಕಕಾಲದಲ್ಲಿ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗದು. ಅಲ್ಲದೇ ಸಿಗ್ನಲ್ ಎರಡು ಬದಿಯಲ್ಲಿ ಆಂಬ್ಯುಲೆನ್ಸ್ಗಳು ಬಂದರೆ ಹೇಗೆ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಇದು ಪ್ರಾಯೋಗಿಕ ಹಂತದಲ್ಲಿದ್ದು ಸಾಧಕ - ಬಾಧಕಗಳ ಅಧ್ಯಯನ ನಡೆಸಿದ ಬಳಿಕ ಜಾರಿ ಮಾಡುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಈಟಿವಿ ಭಾರತ್ಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೀದರ್–ಬೆಂಗಳೂರು ವಿಮಾನ ಸೇವೆ ಪುನಾರಂಭ: 2 ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚನೆ - Bidar Bengaluru Flight