ಬೆಂಗಳೂರು: ''ಉಪ ಚುನಾವಣೆಗಳಲ್ಲಿ ಹಣ ಹಾಗೂ ತೋಳ್ಬಲ ಹೆಚ್ಚಾಗಿದ್ದರಿಂದ ಫಲಿತಾಂಶ ನಾನು ಅಂದುಕೊಳ್ಳುವ ರೀತಿ ಆಗಿಲ್ಲ. ಆ ಒಂದು ಸಮುದಾಯ ನಮ್ಮನ್ನು ಕೈ ಹಿಡಿಯಲಿಲ್ಲ'' ಎಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸೋತ ಮಾತ್ರಕ್ಕೆ ಮನೆ ಸೇರಿಕೊಳ್ಳಲ್ಲ: ಪದ್ಮನಾಭನಗರದಲ್ಲಿ ಶನಿವಾರ ಸಂಜೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ''ಇದು ಕುಮಾರಸ್ವಾಮಿ ಸೋಲು ಅಂತ ನಾನು ಹೇಳಲ್ಲ. ಕೊನೆಯ ಹಂತದಲ್ಲಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಆದಂತಹ ತೀರ್ಮಾನವಾಗಿತ್ತು. ನಮ್ಮ ಪಕ್ಷದ ಎಲ್ಲ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಚುನಾವಣೆ ನನಗೆ ಅಗ್ನಿಪರೀಕ್ಷೆ ಆಗಿತ್ತು. ಇಲ್ಲಿ ಯಾರು ನಮಗೆ ಸಂಕಷ್ಟಕ್ಕೆ ದೂಡಿದರು, ಇವೆಲ್ಲವೂ ಜಗಜ್ಜಾಹೀರಾಗಿದೆ. ಕಾರಣಾಂತರಗಳಿಂದ ನಾವು ಸೋಲು ಕಂಡಿದ್ದೇವೆ. ನಾನು ಸೋತ ಮಾತ್ರಕ್ಕೆ ಮನೆ ಸೇರಿಕೊಳ್ಳಲ್ಲ'' ಎಂದರು.
''ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವೇ ಗೆಲುವು ಕಾಣಲಿದೆ. ಉಪ ಚುನಾವಣೆಗಳಲ್ಲಿ ನಾವು ಅಂದುಕೊಂಡ ಮಟ್ಟಿಗೆ ಫಲಿತಾಂಶ ಬರಲ್ಲ. ಈ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹೆಚ್ಚು ಮಾತನಾಡಲ್ಲ, ಜನರು ತೀರ್ಪು ಕೊಟ್ಟಿದ್ದಾರೆ. ಸೋಲು ಖಂಡಿದ್ದೇನೆ, ತಲೆಬಾಗುತ್ತೇನೆ. ಯುವಕರಿಗೆ ಒಂದು ಮಾತು ಕೊಟ್ಟಿದ್ದೆ. ಅಧಿಕಾರ ಇದೆಯೋ ಇಲ್ವೋ ಪ್ರಶ್ನೆಯಿಲ್ಲ. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿ ಕೆಲಸ ಮಾಡುತ್ತೇನೆ'' ಎಂದು ಹೇಳಿದರು.
ದೆಹಲಿಗೆ ಆಹ್ವಾನ: ''ಹೆಚ್.ಡಿ.ದೇವೇಗೌಡರು ದೀರ್ಘ ಕಾಲದಲ್ಲಿ ಸಾಕಷ್ಟು ಚುನಾವಣೆ ಎದುರಿಸಿದ್ದಾರೆ. ಚುನಾವಣೆಯಲ್ಲಿ ಏಳು-ಬೀಳು ಸಾಮಾನ್ಯ. ಚುನಾವಣೆಯನ್ನು ಸಮಚಿತ್ತವಾಗಿ ತೆಗೆದುಕೊಂಡು ಹೋಗುವ ರಾಜಕಾರಣಿ ಇದ್ದರೆ, ಅದು ದೇವೇಗೌಡರು ಮಾತ್ರ. ಸುದೀರ್ಘವಾಗಿ ದೇವೇಗೌಡರ ಜೊತೆಗೆ ಮಾತನಾಡಿದ್ದೇನೆ. ಮುಂದೆ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಅಂತ ದೇವೇಗೌಡರು ಹೇಳಿದ್ದಾರೆ. ನಾಳೆಯಿಂದ ಸಂಸತ್ ಅಧಿವೇಶನ ಪ್ರಾರಂಭವಾಗುತ್ತಿದೆ. ನಮ್ಮ ಪಕ್ಷದ ಮುಖಂಡರಿಗೆ ದೆಹಲಿಗೆ ಬರುವಂತೆ ಹೇಳಿದ್ದಾರೆ'' ಎಂದರು.
ಜೆಡಿಎಸ್ - ಬಿಜೆಪಿ ಪರಾಮರ್ಶೆ ಸಭೆ: ''ರಾಮನಗರ ಜಿಲ್ಲೆ ಹಾಗೂ ನಮ್ಮ ನಂಟು ಸುಮಾರು 40 ವರ್ಷಗಳಿಂದ ಇದೆ. ರಾಮನಗರ ಜಿಲ್ಲೆ 8 ಬಾರಿ ನಮಗೆ ಶಾಸಕ ಸ್ಥಾನ ಕೊಟ್ಟಿದೆ. ಕುಮಾರಸ್ವಾಮಿ ಅವರನ್ನು ಜನರು ಕೇಂದ್ರ ಸಚಿವ ಸ್ಥಾನದಲ್ಲಿ ಕೂರಿಸಿದ್ದಾರೆ. ಒಂದು ಪಕ್ಷದ ರಾಜ್ಯಾಧ್ಯಕ್ಷರು ಸೋಲು ಹಾಗೂ ಗೆಲುವಿನ ಆತ್ಮ ವಿಮರ್ಶೆ ಮಾಡಿಕೊಳ್ತಾರೆ. ಸಾಮಾನ್ಯವಾಗಿ ರಾಜ್ಯಾಧ್ಯಕ್ಷರು ಸೋಲಿನ ವಿಮರ್ಶೆ ಮಾಡುತ್ತಾರೆ. ಪಕ್ಷದ ಕಾರ್ಯಕರ್ತರು, ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತೇನೆ, ಸಂಘಟನೆ ಮಾಡ್ತೇನೆ. ಶೀಘ್ರದಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಪರಾಮರ್ಶೆ ಸಭೆ ನಡೆಯಲಿದೆ. ಒಂದು ವಾರದಲ್ಲಿ ಪಕ್ಷದ ಕಾರ್ಯಕರ್ತರ ಕೃತಜ್ಞತೆ ಸಭೆ ನಡೆಯಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ: ನನ್ನನ್ನು ಯಾರೂ ಪ್ರಚಾರಕ್ಕೆ ಕರೆದಿಲ್ಲ, ನಿಖಿಲ್ 3ನೇ ಸೋಲನ್ನು ಧೈರ್ಯವಾಗಿ ಎದುರಿಸಬೇಕು: ಜಿ.ಟಿ.ದೇವೇಗೌಡ