ಹುಬ್ಬಳ್ಳಿ: ರಾಷ್ಟ್ರೀಯ ತನಿಖಾ ಸಂಸ್ಥೆ ಬಹುದೊಡ್ಡ ಪ್ರಶಂಸೆಯ ಕೆಲಸವನ್ನು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಳ ಮೇಲೆ ರಾಜಕೀಯ ಮಾಡುವಂತ ದುಸ್ಥಿತಿಗೆ ಇಳಿದಿರುವುದು ವಿಪರ್ಯಾಸದ ಸಂಗತಿ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ''ರಾಮೇಶ್ವರಂ ಕೆಫೆ ಬ್ಲಾಸ್ಟ್ ಆಗಿರುವ ಸಂದರ್ಭದಲ್ಲಿ ರಾಜ್ಯದ ಮಂತ್ರಿಗಳು ವೈಯಕ್ತಿಕ ದ್ವೇಷ, ಸಿಲಿಂಡರ್ ಬ್ಲಾಸ್ಟ್ ಎಂದು ಸಮಜಾಯಿಷಿ ನೀಡಿದ್ದರು. ತಕ್ಷಣ ಅನುಮಾನಗೊಂಡ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತು. ಈ ನಿಟ್ಟಿನಲ್ಲಿ ಈಗ ಕೇಂದ್ರ ಗುಪ್ತಚರ ಇಲಾಖೆಯು ಈಗ ಮಹತ್ವದ ಕಾರ್ಯವನ್ನು ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಭದ್ರತೆಗೆ ಧಕ್ಕೆ ತರುವುದರ ಜೊತೆಗೆ ಇದು ಯಾವುದೇ ಟೆರೆರಿಸ್ಟ್ ಕೃತ್ಯ ಅಲ್ಲವೆಂದು ನಿರೂಪಿಸಲು ಹೊರಟಿದ್ದರು. ಇದು ದೇಶದ ಭದ್ರತೆಗೆ ಧಕ್ಕೆ ತರುವ ಬಹುದೊಡ್ಡ ಷಡ್ಯಂತ್ರ'' ಎಂದು ಆರೋಪಿಸಿದರು.
''ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ವಿನಾಯಿತಿ ಕೊಡುವ ಕೆಲಸವನ್ನು ಮಾಡಿರುವ ಕಾಂಗ್ರೆಸ್ ಸರ್ಕಾರ ದೇಶದ ಬಗ್ಗೆ ದೇಶದ ಭದ್ರತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇಂತಹ ರಾಜಕಾರಣ ಮಾಡುವುದು ಸರಿಯಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಟಿ ಮೋರ್ಚಾ ಸಮಾವೇಶಕ್ಕೆ ಶ್ರೀರಾಮುಲು ಚಾಲನೆ; ಧಾರವಾಡ ಲೋಕಸಭಾ ಚುನಾವಣೆ ಪ್ರಚಾರಾರ್ಥ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಎಸ್ ಟಿ ಸಮಾವೇಶಕ್ಕೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಶ್ರೀರಾಮುಲು ಚಾಲನೆ ನೀಡಿದರು.
ಹುಬ್ಬಳ್ಳಿ ಗೋಕುಲ ಗಾರ್ಡನ್ನಲ್ಲಿ ನಡೆದ ಎಸ್ ಟಿ ಸಮಾವೇಶದಲ್ಲಿ ಬಿಜೆಪಿಗೆ ಮತದಾನ ಮಾಡುವಂತೆ ಮನವಿ ಮಾಡಲಾಯಿತು. ಅಲ್ಲದೇ ಲೋಕಸಭಾ ಕ್ಷೇತ್ರದ ಎಸ್‌ಟಿ ಮುಖಂಡರು ಹಾಗೂ ಬಹುತೇಕ ಕಾರ್ಯಕರ್ತರು ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರಗನ್ನು ತಂದರು.
ಇನ್ನು, ಸಮಾವೇಶದಲ್ಲಿ ಎಸ್ ಟಿ ರಾಜ್ಯಾಧ್ಯಕ್ಷ ಹನುಮಂತರಾಜು, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್, ಎಂ ಆರ್ ಪಾಟೀಲ ಸೇರಿದಂತೆ ಬಹುತೇಕ ನಾಯಕರು ಭಾಗವಹಿಸಿದ್ದರು.
ಇದನ್ನೂಓದಿ:ನಾಳೆ ಮಂಗಳೂರಲ್ಲಿ ಮೋದಿ ರೋಡ್ ಶೋ: ವಾಹನ ಸಂಚಾರ ನಿಷೇಧಿತ ಮಾರ್ಗಗಳ ಮಾಹಿತಿ ಹೀಗಿದೆ - Modi roadshow in mangaluru