ಬೆಂಗಳೂರು: ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ), ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯವು ಸೋಮವಾರ ಶಿಕ್ಷೆ ಪ್ರಕಟಿಸಿದೆ.
ಜಹಾನ್ ಜೈಬ್ ಸಮಿಗೆ 3 ರಿಂದ 20 ವರ್ಷ, ಹೀನಾ ಬಶೀರ್ ಬೇಗ್ ಮತ್ತು ಸಾದಿಯಾ ಅನ್ವರ್ ಶೇಕ್ಳಿಗೆ 7 ವರ್ಷ ಹಾಗೂ ನಬೀಲ್ ಸಿದ್ದಿಕ್ ಖತ್ರಿಗೆ ತಲಾ 8 ವರ್ಷಗಳ ಶಿಕ್ಷೆ ಹಾಗೂ 2.5 ಲಕ್ಷ ದಂಡ (ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 2 ವರ್ಷಗಳ ಜೈಲು ಶಿಕ್ಷೆ) ವಿಧಿಸಲಾಗಿದೆ. ಇನ್ನೋರ್ವ ಆರೋಪಿ ಅಬ್ದುಲ್ಲಾ ಬಸಿತ್ಗೆೆ ಈಗಾಗಲೇ ಶಿಕ್ಷೆ ಪ್ರಕಟವಾಗಿದ್ದು, ಅದೇ ಸಜೆ ಮುಂದುವರೆಸಲಾಗಿದೆ.
ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಜೊತೆ ನಂಟು ಹೊಂದಿದ್ದ ಜಹಾನ್ ಜೈಬ್ ಸಮಿ ವಾನಿ ಹಾಗೂ ಆತನ ಪತ್ನಿ ಹೀನಾ ಬಶೀರ್ ಬೇಗ್ ಎಂಬಾಕೆಯನ್ನ ದೆಹಲಿಯ ಓಕ್ಲಾ ವಿಹಾರದಿಂದ 2020ರ ಮಾರ್ಚ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ ಆರೋಪಿಗಳ ವಿರುದ್ಧ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿತ್ತು.
ತನಿಖೆಯ ಮುಂದುವರೆದ ಭಾಗವಾಗಿ ಸಾದಿಯಾ ಅನ್ವರ್ ಶೇಕ್, ನಬೀಲ್.ಎಸ್. ಖತ್ರಿ ಎಂಬಾತನನ್ನು 2020 ರ ಜುಲೈ 12 ರಂದು ಬಂಧಿಸಿದ್ದ ಎನ್ಐಎ ಅಧಿಕಾರಿಗಳು, ಅದೇ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಅಬ್ದುರ್ ರೆಹಮಾನ್ ಅಲಿಯಾಸ್ ಡಾ.ಬ್ರೇವ್ ಎಂಬಾತನನ್ನು ಬಂಧಿಸಿದ್ದರು. ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ ಅಬ್ದುರ್ ರೆಹಮಾನ್, ಆರೋಪಿಗಳ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದ. 2013 ರಲ್ಲಿ ಸಿರಿಯಾಗೆ ತೆರಳಿ ಐಸಿಸ್ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಉಗ್ರರ ಚಿಕಿತ್ಸೆಗೆ ಮೆಡಿಕಲ್ ಅಪ್ಲಿಕೇಷನ್ ಹಾಗೂ ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಮಿಸೈಲ್ ಅಪ್ಲಿಕೇಷನ್ ಸಿದ್ಧಪಡಿಸುವುದನ್ನು ಕಲಿತಿದ್ದ. ಆತನ ವಿಚಾರಣೆ ಮುಂದುವರೆದಿದೆ. ಆರೋಪಿಗಳ ವಿರುದ್ಧ 2020 ರ ಮಾರ್ಚ್‌ನಲ್ಲಿ ಎನ್ಐಎ ಪೂರಕ ಚಾರ್ಜ್ಶೀಟ್ ಸಲ್ಲಿಸಿತ್ತು.