ತುಮಕೂರು: "ಬೆಂಗಳೂರಿನಲ್ಲಿ ಅಪಾಯಕಾರಿಯಾದ ಡ್ರಗ್ ಪತ್ತೆಯಾಗಿದ್ದು, ಅದು ಎಲ್ಲೆಡೆ ವ್ಯಾಪಿಸುವ ಆತಂಕವಿದೆ" ಎಂದು ಚಿತ್ರನಟ ದುನಿಯಾ ವಿಜಯ್ ತಿಳಿಸಿದ್ದಾರೆ. ಭೀಮ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ವಿಷಯವನ್ನು ಸ್ವಾಮೀಜಿಯ ಬಳಿ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದರು.
"ಈ ಡ್ರಗ್ ಅನ್ನು ನಾನು ಕಂಡುಹಿಡಿದಿದ್ದೇನೆ, ಅದು ಕರ್ನಾಟಕದಾದ್ಯಂತ ವ್ಯಾಪಿಸಲಿದೆ. ಎಲ್ಲೆಡೆ ವ್ಯಾಪಿಸುವುದನ್ನು ನಿಯಂತ್ರಿಸಬೇಕಿದೆ. ಆ ಡ್ರಗ್ ಅನ್ನು ಅವರವರೇ ಕಂಡುಹಿಡಿದುಕೊಂಡು ಬಳಸುತ್ತಿದ್ದಾರೆ" ಎಂದು ಹೇಳಿದರು. ಅಲ್ಲದೇ ತಮ್ಮ ಮೊಬೈಲ್ನಲ್ಲಿ ಈ ಡ್ರಗ್ ಕುರಿತು ಇರುವ ಕೆಲವೊಂದು ಮಾಹಿತಿಯನ್ನು ಸ್ವಾಮೀಜಿಯವರೊಂದಿಗೆ ಹಂಚಿಕೊಂಡರು.
"ಆಗಸ್ಟ್ 9 ಕ್ಕೆ ಭೀಮ ಸಿನಿಮಾ ರಿಲೀಸ್ ಆಗ್ತಾ ಇದೆ. ಇದೊಂದು ಒಳ್ಳೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗೆ, ಮಕ್ಕಳು ಮಾದಕ ವ್ಯಸನಿಗಳಾಗ್ತಾ ಇದ್ದಾರೆ. ಅದನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎನ್ನುವುದು ಸಿನಿಮಾದ ತಿರುಳು. ಸಿದ್ಧಗಂಗಾ ಕ್ಷೇತ್ರ ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ರೂಪಿಸುತ್ತಿರುವಂತಹ ಜಾಗ. ಹಾಗಾಗಿ ನಾನು ಪ್ರತಿ ಸಿನಿಮಾ ರಿಲೀಸ್ಗೂ ಮೊದಲು ಇಲ್ಲಿ ಬಂದು ಪೂಜೆ ಮಾಡಿಕೊಂಡು ಹೋಗುತ್ತೇನೆ." ಎಂದರು.
"ನಾನು ಸಿನಿಮಾದ ಪ್ರೊಮೋಷನ್ ವಿಷಯವಾಗಿ ಯಾವತ್ತೂ ಕಾಲೇಜುಗಳಿಗೆ ಹೋಗುತ್ತಿರಲಿಲ್ಲ. ಇದೀಗ ಮೊದಲು ಇಲ್ಲಿ ಪೂಜೆ ಸಲ್ಲಿಸಿ, ಮುಂದೆ ತುಮಕೂರು ಸರ್ಕಾರಿ ಕಾಲೇಜಿಗೆ ಹೋಗೋಣ ಅಂತಿದ್ದೇವೆ. ಬೆಂಗಳೂರಲ್ಲಿ ಹುಟ್ಟಿಕೊಂಡಿರುವಂತಹ ಹೊಸ ಮಾದಕ ಅಂಶ, ಈಗಾಗಲೇ ಎಲ್ಲಾ ತಾಲೂಕುಗಳ ಬಾಗಿಲುಗಳನ್ನು ತಟ್ಟಿ ಒಳಬರುತ್ತಿದೆ. ಅದನ್ನು ತಡೆಗಟ್ಟಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗುರುಗಳ ಜೊತೆಗೂ ಚರ್ಚಿಸಿದೆ. ಅವರೂ ನಮ್ಮ ಜೊತೆಗಿದ್ದೇವೆ. ಎಲ್ಲಾ ಕಡೆ ಇದು ಜಾಸ್ತಿಯಾಗಿದೆ. ಒಳ್ಳೆ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡಿದ್ದೀರಿ ಎಂದು ಬೆನ್ನು ತಟ್ಟಿದರು" ಎಂದು ಹೇಳಿದರು.
ಇದನ್ನೂ ಓದಿ: ಕಲ್ಕಿ 2898 AD ದೊಡ್ಡ ಯಶಸ್ಸಿಗೆ ಕಾರಣವಾದ ಅಭಿಮಾನಿಗಳಿಗೆ ರಿಯಾಯಿತಿ ಟಿಕೆಟ್! - KALKI 2898 AD TICKET OFFER