ಧಾರವಾಡ: ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹಳೇ ಬೈಕ್ ಬಳಸಿಕೊಂಡು ಅದನ್ನು ವಿದ್ಯುತ್‌ಚಾಲಿತ ಬೈಕನ್ನಾಗಿ ಪರಿವರ್ತಿಸಿ ಗಮನ ಸೆಳೆದಿದ್ದಾರೆ. ನೂತನ ಆವಿಷ್ಕಾರಕ್ಕೆ ಒಟ್ಟು 12 ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಇದರ ಫಲವಾಗಿ ಪೆಟ್ರೋಲ್‌ಚಾಲಿತ ಹಳೆಯ ಬೈಕ್ ಇದೀಗ ಇವಿ ಬೈಕ್ ಆಗಿ ರೂಪುಗೊಂಡಿದೆ.
ರಾಜ್ಯ ಸರ್ಕಾರದ ಉದ್ಯೋಗ ಸ್ಕೀಮ್ ಅಡಿಯಲ್ಲಿ ಇದನ್ನು ನಿರ್ಮಾಣ ಮಾಡಿದ್ದಾರೆ. ಒಂದು ವಾರಗಳ ಕಾಲ ವಿದ್ಯಾರ್ಥಿಗಳು ಶ್ರಮಿಸಿ ಬೈಕ್ ಸಿದ್ಧಗೊಳಿಸಿದ್ದಾರೆ. ಹಳೇ ಹೀರೋ ಹೊಂಡಾ ಇದೀಗ ಎರಡು ಬ್ಯಾಟರಿ ಹಾಗೂ ಒಂದು ಮೋಟಾರ್ ಸಹಾಯದಿಂದ ವಿದ್ಯುತ್ ಚಾಲಿತ ಬೈಕ್ ಆಗಿ ಬದಲಾಗಿದೆ.
ಈ ಕುರಿತು ಕಾಲೇಜು ಮುಖ್ಯಸ್ಥರಾದ ರವೀಂದ್ರ ಮಾತನಾಡಿ, ''ನಮ್ಮ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ತರಬೇತಿ ಅಭ್ಯರ್ಥಿಗಳು ಉದ್ಯೋಗ ಸ್ಕೀಮ್ ಅಡಿ ಬರುವ ಟ್ರೇಡ್ಗಳನ್ನು ಅಳವಡಿಸಿ ಕಾರ್ಯೋನ್ಮುಖರಾಗಿದ್ದಾರೆ. ಅದರ ಮುಂದುವರೆದ ಭಾಗವಾಗಿ ನಮ್ಮ ತರಬೇತಿದಾರರು ಹೀರೋ ಹೊಂಡ ಸ್ಪ್ಲೆಂಡರ್ ಪೆಟ್ರೋಲ್ ಬೈಕ್ ಅನ್ನು ಬ್ಯಾಟರಿಚಾಲಿತ ಎಲೆಕ್ಟ್ರಿಕ್ ಬೈಕ್ ಆಗಿ ಬದಲಾಯಿಸಿದ್ದಾರೆ. ಇದು ಹೆಮ್ಮೆಯ ಸಂಗತಿ. ಇಂತಹ ಕ್ರಿಯೇಟಿವ್ ಹಾಗೂ ಇನೋವೇಟಿವ್ ವಿಚಾರಗಳು ಮಕ್ಕಳಲ್ಲಿ ಬರುತ್ತಿರುವುದು ಸಂತೋಷ. ಇದರಿಂದ ಮುಂದಿನ ದಿನಗಳಲ್ಲಿ ನಮ್ಮ ಇಂಡಸ್ಟ್ರಿ ಹಾಗೂ ಸಮಾಜಕ್ಕೆ ಉತ್ತಮ ಅವಕಾಶಗಳು ದೊರೆಯುತ್ತವೆ'' ಎಂದರು.
ಇದನ್ನೂ ಓದಿ: ಸ್ಕ್ರ್ಯಾಪ್ ವಸ್ತುಗಳ ಬಳಕೆ.. ಐಟಿಐ ವಿದ್ಯಾರ್ಥಿಗಳ ಕೈಗಳಿಂದ ಅರಳಿದ ವಿಂಟೇಜ್ ಮಾಡೆಲ್ ಬೈಕ್ಗಳು!!