ನೆಲಮಂಗಲ(ಬೆಂಗಳೂರು): ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಅಂತಹ ಮನೆಗಳಿಗೆ ಎಂಟ್ರಿ ಕೊಟ್ಟು ಕ್ಷಣಾರ್ಧದಲ್ಲೇ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲ ಪಟ್ಟಣದಲ್ಲಿ ನಡೆದಂತಹ ಮನೆಕಳ್ಳತನ ಪ್ರಕರಣದ ತನಿಖೆ ಜಾಡು ಹಿಡಿದ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ SD ಶಶಿಧರ್ ಹಾಗೂ ತಂಡ ಕೋಲಾರದ ಬಂಗಾರಪೇಟೆ ಮೂಲದ 39 ವರ್ಷದ ಸೈಯದ್ ಅಹಮದ್ ಬಿನ್ ಅಬ್ದುಲ್ ಜಬ್ಬಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಈತನಿಂದ 25 ಲಕ್ಷ ರೂಪಾಯಿ ಮೌಲ್ಯದ 531 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಹಾಗೂ ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಇನ್ಸ್ಪೆಕ್ಟರ್ SD ಶಶಿಧರ್ ಮತ್ತು ತಂಡ ವಾರಸುದಾರರಿಗೆ ಹಿಂತಿರುಗಿಸಿದರು.
ಕಳ್ಳತನವಾದ ಅಭರಣಗಳನ್ನು ಹಿಂಪಡೆದ ಶ್ವೇತ ಎಂಬುವರು ಮಾತನಾಡಿ, 'ನಾವೆಲ್ಲರೂ ಮಗಳ ಡ್ಯಾನ್ಸ್ ಕಾರ್ಯಕ್ರಮ ನೋಡಲು ಹೋಗಿದ್ದೆವು. ನಂತರ ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳ ಮನೆಯ ಬೀಗ ಒಡೆದು ಲಾಕರ್ ಮುರಿದು ಮನೆಯಲ್ಲಿದ್ದ ಚಿನ್ನ ಕದ್ದು ಪರಾರಿಯಾಗಿದ್ದ. ತಕ್ಷಣ ನಾವು ಇನ್ಸ್ಪೆಕ್ಟರ್ ಶಶಿಧರ್ ಅವರಿಗೆ ಮಾಹಿತಿ ನೀಡಿದ್ದೆವು. ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಶಶಿಧರ್ ಅವರು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ಉತ್ತಮ ಕಾರ್ಯಾಚರಣೆ ನಡೆಸಿ ಆ ಕಳ್ಳನನ್ನು ಪತ್ತೆ ಮಾಡಿ ಆತ ಕದ್ದಿದ್ದ ನಮ್ಮ ಒಡವೆಗಳನ್ನು ನಮಗೆ ಹಿಂತಿರುಗಿಸಿದ್ದಾರೆ. ತುಂಬಾ ಸಂತೋಷವಾಗಿದೆ. ಇನ್ಸ್ಪೆಕ್ಟರ್ ಶಶಿಧರ್ ಹಾಗೂ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇವೆ' ಎಂದರು.
ಹಾಗೇ, ಚಿನ್ನಾಭರಣ ವಾಪಸ್ ಪಡೆದ ವಿಜಯಲಕ್ಷ್ಮೀ ಎಂಬುವರು ಮಾತನಾಡಿ, 'ನಮ್ಮ ತಂಗಿಯವರಿಗೆ ವರನನ್ನು ನೋಡಲು ಮನೆಯವರೆಲ್ಲ ಹೋಗಿದ್ದೆವು. ಆ ಸಂದರ್ಭದಲ್ಲಿ ಕಳ್ಳ ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ ಒಡವೆ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಕೂಡಲೇ ಮನೆಗೆ ಬಂದು ಇನ್ಸ್ಪೆಕ್ಟರ್ ಶಶಿಧರ್ ಅವರು ಪರಿಶೀಲನೆ ಮಾಡಿದರು. ಆದಷ್ಟು ಬೇಗ ಕಳ್ಳನನ್ನು ಬಂಧಿಸಿ ಕಳೆದು ಹೋದ ಒಡವೆ ಹಿಂತಿರುಗಿಸಿ ಕೊಡುವ ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಆ ಕಳ್ಳನನ್ನು ಬಂಧಿಸಿ ಅವನಿಂದ ನಮ್ಮ ಒಡವೆಗಳನ್ನು ವಾಪಸ್ ಕೊಟ್ಟಿದ್ದಾರೆ ಅವರಿಗೆ ತುಂಬಾ ಧನ್ಯವಾದಗಳು' ಎಂದರು.
ಇನ್ನು ಬಂಧಿತ ಆರೋಪಿ ಈಗಾಗಲೇ ನೆಲಮಂಗಲ ಟೌನ್, ನೆಲಮಂಗಲ ಗ್ರಾಮಾಂತರ, ಮೈಕೋ ಲೇಔಟ್, ಮಾದನಾಯಕನಹಳ್ಳಿ, ತುಮಕೂರು, ಕ್ಯಾತಸಂದ್ರ ,ಸಿಟಿ ಮಾರ್ಕೆಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 45 ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಇಂತಹ ಖತರ್ನಾಕ್ ಕಳ್ಳನನ್ನು ಬಂಧಿಸಿದ ಇನ್ಸ್ಪೆಕ್ಟರ್ SD ಶಶಿಧರ್, PSI ನಂಜಯ್ಯ, ಸಿಬ್ಬಂದಿಗಳಾದ ASI ರಘು, ಬಸವರಾಜ್, ಹರೀಶ್, ಪ್ರಕೃದ್ದೀನ್ ಸಾಬ್ ಪಠಾಣ್ ಸೇರಿದಂತೆ ನೆಲಮಂಗಲ ಟೌನ್ ಪೊಲೀಸರನ್ನು SP ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದರು.
ಇದನ್ನೂ ಓದಿ: ಬೆಂಗಳೂರು: ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ನಕಲಿ ಖಾತೆ; 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ