ಬಾಗಲಕೋಟೆ: ನೇಹಾ ಹತ್ಯೆ ಪ್ರಕರಣವನ್ನು 'ಲವ್ ಜಿಹಾದ್' ಎಂದು ಅಮಿತ್ ಶಾ ಹೇಳಿರುವುದು ರಾಜಕೀಯಕ್ಕೋಸ್ಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರದಲ್ಲಿ ಇಂದು ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾವು ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಕೊಟ್ಟಿದ್ದೇವೆ. ವಿಚಾರಣೆಗೆ ಸ್ಪೆಷಲ್ ಕೋರ್ಟ್ ಮಾಡಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ಮಾತನಾಡಿದ್ದೀನಿ ಎಂದು ಹೇಳಿದರು.
ಸರಕಾರ ಕಾನೂನು ಪ್ರಕಾರ ಏನೆಲ್ಲಾ ಮಾಡೋಕೆ ಸಾಧ್ಯವಿದೆಯೋ ಮಾಡಿದ್ದೇವೆ. ಪ್ರಕರಣವನ್ನು ಲವ್ ಜಿಹಾದ್ ಅಂತ ರಾಜಕೀಯಗೋಸ್ಕರ ಹೇಳಿದ್ದಾರೆ. ಹಾಗಿದ್ದರೆ, ಮಣಿಪುರ ಘಟನೆ ಬಗ್ಗೆ ಅಮಿತ್ ಶಾ ಯಾಕೆ ಮಾತಾಡಲಿಲ್ಲ?. ಮಣಿಪುರ ಸರಕಾರವನ್ನೇ ಅವರು ಮುಂದುವರೆಸಿದರು. ಸರ್ಕಾರವನ್ನು ಸೂಪರ್ ಸೀಡ್ ಮಾಡಿದ್ರಾ?. ಮುಖ್ಯಮಂತ್ರಿಯನ್ನು ಬದಲಾಯಿಸಿದ್ರಾ? ಎಂದು ತಿರುಗೇಟು ನೀಡಿದರು.
ಇನ್ನು, ಹಾಸನ ಪೆನ್ಡ್ರೈವ್ ಪ್ರಕರಣದ ಸಂತ್ರಸ್ತೆಯನ್ನು ಹೆಚ್.ಡಿ.ರೇವಣ್ಣನವರ ಆಪ್ತರು ಅಪಹರಿಸಿದ್ದಾರೆ ಎಂಬ ವಿಚಾರಕ್ಕೆ, ಆ ಹೆಣ್ಣು ಮಗಳು ಎಲ್ಲಿ ಹೋಗಿದ್ದಾರೆ ಎಂದು ಪತ್ತೆ ಹಚ್ಚಲು ಸೂಚನೆ ಕೊಟ್ಟಿದ್ದೇನೆ ಎಂದರು.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡಲಿ: ಪ್ರಜ್ವಲ್ ರೇವಣ್ಣ ಎಲ್ಲೇ ಹೋಗಿದ್ದರೂ ಹಿಡಿದುಕೊಂಡು ಬರುತ್ತೇವೆ. ಪಾಸ್‌ಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಪಾಸ್‌ಪೋರ್ಟ್ ರದ್ದಾದ ಆದ ಮೇಲೆ ವಿದೇಶದಲ್ಲಿ ಇರಲು ಆಗಲ್ವಲ್ಲಾ?. ಹೀಗಾಗಿ ಪ್ರಧಾನಿ ಪಾಸ್‌ಪೋರ್ಟ್ ರದ್ದು ಮಾಡಲಿ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಹೆಚ್ ಡಿ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್: ಅಪಹರಣದ ದೂರು ದಾಖಲಿಸಿದ ಮಹಿಳೆಯೊಬ್ಬರ ಪುತ್ರ - Hassan Pen Drive Case