ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ನಿಗದಿಗಿಂತ ಹೆಚ್ಚುವರಿ ಪ್ರಯಾಣಿಕರಿದ್ದು, ಅದು ಅಪಘಾತಕ್ಕೀಡಾದರೆ ಅದಕ್ಕೆ ಸವಾರರ ನಿರ್ಲಕ್ಷ್ಯವೂ ಕಾರಣವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ, ಅದೇ ಆಧಾರದ ಮೇಲೆ ಶೇ.100 ರಷ್ಟು ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಸವಾರನ ನಿರ್ಲಕ್ಷ್ಯಕ್ಕೂ ಬೆಲೆ ನಿಗದಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಐಸಿಐಸಿಐ ಲಾಂಬೋರ್ಡ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಮೋಟಾರ್ ಬೈಕ್ ಮೇಲೆ ನಾಲ್ವರು ಪ್ರಯಾಣ ನಡೆಸುತ್ತಿದ್ದರೆ, ಪರಿಹಾರ ಕೋರಿರುವವರು ಒಬ್ಬರು ಸವಾರರು. ಹಾಗಾಗಿ ಪರಿಹಾರ ಕೋರಿರುವವರಿಗೆ ಚೆನ್ನಾಗಿ ತಿಳಿದಿದೆ ನಾಲ್ವರು ಪ್ರಯಾಣಿಸುತ್ತಿದ್ದೇವೆಂದು. ಹಾಗಾಗಿ ಪರಿಹಾರ ಕೋರಿರುವ ಆಕೆಗೆ ಅಪಾಯಕಾರಿ ಎಂಬುದು ತಿಳಿದಿದೆ. ಆದ್ದರಿಂದ ತನ್ನ ನಿರ್ಲಕ್ಷ್ಯಕ್ಕೆ ಆಕೆಯೂ ಬೆಲೆ ತೆರಬೇಕಾಗುತ್ತದೆ ಎಂದು ಪೀಠ ಹೇಳಿದೆ.
ವಿಮಾ ಕಂಪನಿಯ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಾಲಯ, ಅಪಘಾತ ಪರಿಹಾರ ನ್ಯಾಯಮಂಡಳಿ ನಿಗದಿಪಡಿಸಿದ್ದ ಪರಿಹಾರ ಆದೇಶವನ್ನು ಮಾರ್ಪಾಡು ಮಾಡಿ, ಅಪಘಾತಕ್ಕೆ ಸವಾರನ ಶೇ.20ರಷ್ಟು ನಿರ್ಲಕ್ಷ್ಯವಿದ್ದು, ಅದಕ್ಕೆ ಆಕೆಯೂ ಬಾಧ್ಯಸ್ಥಳಾಗುತ್ತಾಳೆ ಎಂದು ಆದೇಶಿಸಿದೆ.
ಪ್ರಕರಣದಲ್ಲಿ ಬೈಕ್ನಲ್ಲಿ ಮೂರು ಜನ ಸವಾರಿ ಮಾಡುತ್ತಿದ್ದೆರು ಎಂಬುದು ಸಾಬೀತಾಗಿದೆ. ಆಸ್ಪತ್ರೆಯಲ್ಲಿನ ಎಂಎಲ್‌ಸಿ ವಿವರಗಳಲ್ಲೂ ಮೂವರಿಗೆ ಗಾಯಗಳಾಗಿ ಚಿಕಿತ್ಸೆ ಪಡೆದರು ಎಂದು ದಾಖಲಾಗಿದೆ. ಹಾಗಾಗಿ ಪರಿಹಾರ ಕೋರಿರುವವರದ್ದೂ ಶೇ. 20ರಷ್ಟು ನಿರ್ಲಕ್ಷ್ಯ ಇರುವುದರಿಂದ ವಿಮಾ ಕಂಪನಿಯಿಂದ ಅರ್ಜಿದಾರರು ಶೇ. 80ರಷ್ಟು ಮಾತ್ರ ಪರಿಹಾರಕ್ಕೆ ಅರ್ಹರು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ವಿಮಾ ಕಂಪನಿ ಪರ ವಕೀಲರು, ಎಂಎಲ್‌ಸಿ (ಮೆಡಿಕೋ ಲೀಗಲ್ ಕೇಸ್)ನ ವಿವರಗಳ ಪ್ರಕಾರ, ಬೈಕ್ ಅನ್ನು ಚಲಾಯಿಸುತ್ತಿದ್ದಾಗ ಬಿ. ಹರ್ಷಿತಾ ಎಂಬಾಕೆಯೇ ಸ್ವಯಂ ಕೆಳಗೆ ಬಿದ್ದಿದ್ದಾಳೆ. ಪರಿಹಾರ ಕೋರಿರುವ ಆಕೆ ಹಿಂಬದಿ ಸವಾರಳು ಎಂದು ಪರಿಗಣಿಸಿದರೂ ಸಹ, ಮೋಟಾರ್ ಬೈಕ್ ಮೇಲೆ ಮೂವರು ಸವಾರಿ ಮಾಡುತ್ತಿದ್ದರು. ಹಾಗಾಗಿ ಮೋಟಾರ್ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಜತೆಗೆ ಮೂರು ಮಂದಿ ಸವಾರಿ ಮಾಡುವುದರಿಂದ ಅಪಾಯ ಇದ್ದೇ ಇರುತ್ತದೆ ಎಂಬುದು ಸಹ ಅವರಿಗೆ ತಿಳಿದಿತ್ತು. ಹಾಗಾಗಿ ಪರಿಹಾರಕ್ಕೆ ವಿಮಾ ಕಂಪನಿಯೇ ಸಂಪೂರ್ಣ ಹೊಣೆಯಲ್ಲ ಎಂದು ವಾದಿಸಿದ್ದರು.
ಆದರೆ, ಪರಿಹಾರ ಕೋರಿದ್ದವರ ಪರ ವಕೀಲರು, ಅರ್ಜಿದಾರರು ಹಿಂಬದಿಯ ಸವಾರಳು. ಹಾಗಾಗಿ ಪರಿಹಾರದ ಹಕ್ಕು ಕೋರಿರುವುದು ಸರಿಯಿದೆ. ಮೂರು ಮಂದಿ ಸವಾರರು ಬೈಕ್ನಲ್ಲಿದ್ದರು ಎಂಬ ಕಾರಣಕ್ಕೆ ಪರಿಹಾರ ಕೋರಿರುವವರದ್ಧೂ ಸಹ ನಿರ್ಲಕ್ಷ್ಯವಿದೆಯೆಂದು ಹೇಳಲಾಗದು ಎಂದು ವಾದಿಸಿದ್ದರು.
ಇದನ್ನೂ ಓದಿ: 85 ವರ್ಷದ ವೃದ್ದೆಗೆ ವಾರ್ಷಿಕ 14 ಲಕ್ಷ ಜೀವನಾಂಶ ನೀಡುವಂತೆ ಮಗ, ಮೊಮ್ಮಗಳಿಗೆ ಸೂಚಿಸಿದ ಹೈಕೋರ್ಟ್