ಬೆಂಗಳೂರು: ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಜನರ ಮನಗೆದ್ದಿರುವ ನಂದಿನಿ ಬ್ರ್ಯಾಂಡ್ ಇದೀಗ ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾಗಿದೆ. ಇತ್ತೀಚೆಗಷ್ಟೇ ನಗರದಲ್ಲಿ ಪ್ರಾಯೋಗಿಕವಾಗಿ ಕೆಎಂಎಫ್ ಪರಿಚಯ ಮಾಡಿದ್ದ ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಈ ಯಶಸ್ವಿ ಬೆನ್ನಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಈ ಹಿಟ್ಟನ್ನು ವಿತರಿಸಲು ಕೆಎಂಎಫ್ ನಿರ್ಧಾರ ಮಾಡಿದೆ.
ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭ ಮಾಡಿರುವ ದೋಸೆ ಹಿಟ್ಟು, ಇಡ್ಲಿ ಹಿಟ್ಟಿನ ಮಾರಾಟಕ್ಕೆ ಉತ್ತಮ ಬೇಡಿಕೆ ಕೇಳಿ ಬರುತ್ತಿದ್ದು, ಆರಂಭಿಸಿದ ಮೂರು ದಿನಗಳಲ್ಲೇ 2250 ಮೆಟ್ರಿಕ್ ಟನ್‌ಗಳಷ್ಟು ಹಿಟ್ಟು ಮಾರಾಟವಾಗಿದೆ. ಭಾರೀ ಯಶಸ್ಸಿನ ಹಿನ್ನೆಲೆ ಮುಂದಿನ ಒಂದು ವಾರದೊಳಗೆ ಇತರ ಜಿಲ್ಲೆಗಳಲ್ಲೂ ನಂದಿನಿ ಹಿಟ್ಟಿನ ಮಾರಾಟ ಆರಂಭ ಮಾಡಲು ಕೆಎಂಎಫ್ ಮುಂದಾಗಿದೆ.
ನಂದಿನಿ ಪರಿಚಯಿಸಿರುವ ದೋಸೆ ಹಿಟ್ಟಿನಲ್ಲಿ ವೇ-ಪ್ರೊಟೀನ್ ಕೂಡ ಇರುವುದರಿಂದ ಸದ್ಯ ಜಿಮ್, ಡಯಟ್ ಬಗ್ಗೆ ಗಮನಹರಿಸುವವರು ಕೂಡ ಈ ಹಿಟ್ಟಿನ ಮೊರೆಹೋಗುತ್ತಿದ್ದಾರೆ. ಸದ್ಯ ಬೆಂಗಳೂರಲ್ಲಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂ ದೋಸೆ ಹಿಟ್ಟಿಗೆ 80 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದೇ ಪ್ರಥಮ ಬಾರಿಗೆ ದೋಸೆ ಹಿಟ್ಟಿಗೆ ಶೇ.5 ರಷ್ಟು ವೇ-ಪ್ರೋಟಿನ್ ಸೇರಿಸಿ ಜನರಿಗೆ ನೀಡುತ್ತಿದೆ.
ಈಗಾಗಲೇ ಹಲವು ಉತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಜನರ ಮನಗೆದ್ದಿರುವ ನಂದಿನಿ ಬ್ರ್ಯಾಂಡ್, ಇದೀಗ ತನ್ನ ಹೊಸ ಪ್ರಾಡಕ್ಟ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಹೊರಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಡಿ.26ರಂದು ನಂದಿನಿ ಬ್ರ್ಯಾಂಡ್ ವತಿಯಿಂದ ಪ್ರಥಮ ಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ನಂದಿನಿ ವೇ-ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದ್ದರು.
ಸಿಎಂ ಶ್ಲಾಘನೆ: ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದ ಅವರು ''ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸುಪ್ರಸಿದ್ಧ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ. ಹೀಗೆ ನಂದಿನಿಯ ನಾನಾ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್ ಹೆಮ್ಮರವಾಗಿ ಬೆಳೆಯುತ್ತಿದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ನಂತರ ನಂದಿನಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಸುಳಿವು ನೀಡಿದ ಕೆಎಂಎಫ್ ಅಧ್ಯಕ್ಷರು - KMF MILK RATE