ಹುಬ್ಬಳ್ಳಿ; ಹುಬ್ಬಳ್ಳಿ- ಧಾರವಾಡ ಬೈಪಾಸ್ ನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಗಣೇಶ ಚತುರ್ಥಿ ಅಂದ್ರೆ ಸೆ. 7 ರಿಂದ ಹುಬ್ಬಳ್ಳಿ-ಧಾರವಾಡ ಗಬ್ಬೂರು ಬೈಪಾಸ್ ಟೋಲ್ ಶುಲ್ಕ ಸಂಗ್ರಹ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಟೋಲ್ ಹಣ ಕಟ್ಟಿ ಕಟ್ಟಿ ಬೇಸತ್ತಿದ್ದ ವಾಹನ ಸವಾರರು ಈಗ ನಿಟ್ಟುಸಿರು ಬಿಡುವಂತೆ ಆಗಿದೆ. ಇನ್ನೂ ಎಷ್ಟು ವರ್ಷ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಪ್ರಯಾಣಿಕರು ಟೋಲ್ ಪಾವತಿಸಬೇಕ್ರಿ. ಈ ಟೋಲ್ ಪಾವತಿ ಮಾಡಿ ಸಾಕಾಗಿದೆ. ಜನರ ಜೇಬು ಖಾಲಿ ಮಾಡುವುದೇ ಸರ್ಕಾರದ ಉದ್ದೇಶವೇ..? ಎಂಬಂತಹ ಬೇಸರದ ನುಡಿಗಳನ್ನಾಡುತ್ತಿದ್ದ ವಾಹನ ಸವಾರರಿಗೆ ಈಗ ಖುಷಿಯ ಸುದ್ದಿ ಸಿಕ್ಕಿದೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ (ಟೋಲ್) ಗುತ್ತಿಗೆ ಪಡೆದಿದ್ದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ತನ್ನ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸೆ. 7 ರಿಂದ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಲಿದೆ.
ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಿದ್ದು, 1998ರಿಂದಲೂ ಈ ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹಣೆ ಕಾರ್ಯ ನಿರ್ವಹಿಸಿದ್ದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಪ್ರಕಟಿಸಿದೆ. ಈ ಕುರಿತು ಸುತ್ತೋಲೆಯನ್ನೇ ತನ್ನ ನೌಕರರಿಗೆ ಹೊರಡಿಸಿರುವ ಕಂಪನಿಯ ಕಾರ್ಯಕಾರಿ ನಿರ್ದೇಶಕ ಶಿವಕುಮಾರ ಖೇಣಿ, ಸೆ. 7 ರಿಂದ ರಸ್ತೆ ಬಳಕೆದಾರರ ಶುಲ್ಕ ಆಕರಣೆ ಕಾರ್ಯ ಸಂಪೂರ್ಣ ಸ್ಥಗಿತಗೊಳಿಸಲಿದೆ. ಹೀಗಾಗಿ ಕಂಪನಿಯಲ್ಲಿ ಕೆಲಸ ಮಾಡಿದ ನೌಕರರನ್ನು ಸೆ .7 ರಿಂದ ಬಿಡುಗಡೆ ಮಾಡಲಾಗುತ್ತಿದೆ. ಇಷ್ಟು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಕೃತಜ್ಞತೆಗಳನ್ನು ಸುತ್ತೋಲೆ ಉಲ್ಲೇಖಿಸಲಾಗಿದೆ.