ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ 3.3 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ತಪಾಸಣೆಯ ಬಳಿಕ ಕೆಲ ದಿನಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ.
ನಗರದ ಆರ್‌ವಿ ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಮಾರ್ಗದುದ್ದಕ್ಕೂ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ವ್ಯಾಪಿಸಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಕಾಮಗಾರಿ ಮುಗಿದಿದೆ. ಅಂತಿಮ ತಪಾಸಣೆ ಬಾಕಿ ಇದೆ. ಇದಾದ ನಂತರ ಕೆಲ ದಿನಗಳಲ್ಲೇ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಮೇಲ್ಸೇತುವೆಯ ಕೆಳ ಸ್ತರದಲ್ಲಿ ವಾಹನಗಳು ಸಂಚಾರ ನಡೆಸಲಿದ್ದು, ಅದರ ಮೇಲ್ಗಡೆ ಮೆಟ್ರೋ ರೈಲು ಸಂಚರಿಸಲಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 5 ಲೂಪ್‌ಗಳು ಮತ್ತು ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳನ್ನು ಎ, ಬಿ, ಸಿ, ಡಿ, ಮತ್ತು ಇ ಎಂದು ಗುರುತಿಸಲಾಗಿದೆ. ಎ, ಬಿ ಮತ್ತು ಸಿ ರಾಗಿಗುಡ್ಡ, ಬಿಟಿಎಂ ಲೇಔಟ್ ಕಡೆಯಿಂದ ಕೆ.ಆರ್.ಪುರ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲಿವೆ. ಡಿ ಮತ್ತು ಇ ಕೆ.ಆರ್.ಪುರವನ್ನು ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ರಸ್ತೆಗೆ ಸಂಪರ್ಕ ನೀಡಲಿವೆ. ಎ, ಬಿ, ಸಿ ರ್ಯಾಂಪ್ಗಳ ಪ್ರಮುಖ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.
ಇದನ್ನೂ ಓದಿ: 'ನಮ್ಮ ಮೆಟ್ರೋ' ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಬೀಳುತ್ತೆ ದಂಡ! - Namma Metro
ಜೂನ್ ಅಂತ್ಯದೊಳಗೆ ಕಾರ್ಯಾರಂಭಕ್ಕೆ ಇವು ಸಿದ್ಧವಾಗಿವೆ. ಆದರೆ, ಡಿ ಮತ್ತು ಇ ರ್ಯಾಂಪ್ಗಳು 2025ರ ಜೂನ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ವಾಹನ ಸಂಚಾರದ ಮೇಲ್ಸೇತುವೆ ನೆಲಮಟ್ಟದಿಂದ 8 ಮೀಟರ್‌ನಷ್ಟು ಎತ್ತರ ಮತ್ತು ಮೆಟ್ರೋ ಲೇನ್ 16 ಮೀ.ಗಳಷ್ಟು ಎತ್ತರದಲ್ಲಿದೆ.
ಡಬಲ್ ಡೆಕ್ಕರ್ ಮೇಲ್ಸೇತುವೆಯ ಪ್ರಯೋಜನವೇನು?: ಈ ಡಬಲ್ ಡೆಕ್ಕರ್ ಮೇಲ್ಸೇತುವೆ ಸಾಮಾನ್ಯ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನ ನೀಡಲಿದೆ. ವಿಶೇಷವಾಗಿ ರಾಗಿಗುಡ್ಡ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ರಾಗಿಗುಡ್ಡದಿಂದ ಪ್ರಯಾಣಿಸುವವರು ಇನ್ಮುಂದೆ ಸಿಗ್ನಲ್ ಇಲ್ಲದೆ, ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ತೆರಳಬಹುದು. ಇದು ಹೆಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಗೆ ಸುಗಮ ಸಂಪರ್ಕ ಒದಗಿಸಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಬಳಸಿ ಸುರಂಗ ನಿರ್ಮಾಣ - Namma Metro