ಚಾಮರಾಜನಗರ: ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದಿರುವುದಕ್ಕೆ ಆಕ್ರೋಶಗೊಂಡು ಗ್ರಾಮ ಪಂಚಾಯತ್ ಎದುರು ಇಡೀ ದಿನ ಕುಟುಂಬದೊಂದಿಗೆ ವ್ಯಕ್ತಿಯೋರ್ವ ಪ್ರತಿಭಟನೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾರ್ಟಳ್ಳಿ ಗ್ರಾ.ಪಂ ವ್ಯಾಪ್ತಿ ಪಾಳಿಮೇಡು ಗ್ರಾಮದ ನಿವಾಸಿ ಮತದಾರ ಮರುದ ಪಿ ಅವರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಹೀಗಾಗಿ ಮತದಾನ ಮಾಡಲು ಊರಿಗೆ ಬಂದ ವೇಳೆ ಈ ವಿಚಾರ ಗಮನಕ್ಕೆ ಬಂದಿದೆ. ಏಕಾಏಕಿ ತನ್ನ ಹೆಸರನ್ನು ಕೈ ಬಿಟ್ಟಿರುವುದರಿಂದ ಕುಪಿತಗೊಂಡ ಮರುದ, ಪತ್ನಿ ಹಾಗೂ ತಾಯಿ ಜೊತೆ ಗ್ರಾ.ಪಂ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾವಿರಾರು ರೂ. ವ್ಯಯಿಸಿ ಊರಿಗೆ ಬಂದಿದ್ದೇನೆ: ''ಅಂಗನವಾಡಿ ಕಾರ್ಯಕರ್ತೆಯ ಕಣ್ತಪ್ಪಿನಿಂದ ಹೆಸರು ಅಳಿಸಲಾಗಿದೆ ಎಂದು ಗ್ರಾ.ಪಂ ಅಧಿಕಾರಿಗಳು ಸಬೂಬು ಕೊಡುತ್ತಿದ್ದಾರೆ. ಆದರೆ, ನನ್ನ ಮತ- ನನ್ನ ಹಕ್ಕು, ಮತದಾನ ಮಾಡಲೆಂದೇ ಸಾವಿರಾರು ರೂ. ವ್ಯಯಿಸಿ ಊರಿಗೆ ಬಂದಿದ್ದೇನೆ. ಮತದಾನ ನನ್ನ ಹಕ್ಕಾಗಿದ್ದು, ನನಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ'' ಎಂದು ಮರುದ ತಿಳಿಸಿದ್ದಾರೆ.
ಕೇತ್ರದ ಮತದಾರರ ವಿವರ: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,69,389 ಪುರುಷರು, 8,88,113 ಮಹಿಳೆಯರು, 114 ಇತರರು ಸೇರಿದಂತೆ ಒಟ್ಟು 17,57,616 ಮತದಾರರಿದ್ದಾರೆ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್.ಡಿ. ಕೋಟೆ, ನಂಜನಗೂಡು, ವರುಣ, ಟಿ.ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ಹಿರಿಯ ನಾಗರಿಕರ ವಿಶೇಷ ಚೇತನರ ಮತದಾನ: ಚುನಾವಣೆ ಕರ್ತವ್ಯನಿರತ ಅಧಿಕಾರಿಗಳಿಗೆ ವಿವಿಧ ಚುನಾವಣಾ ಕೆಲಸ ಕಾರ್ಯಗಳಿಗಾಗಿ ನೇಮಕವಾಗಿರುವ ಅಧಿಕಾರಿ ಸಿಬ್ಬಂದಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5,222 ಅಂಚೆ ಮತಪತ್ರಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಮನೆಯಲ್ಲಿಯೇ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಬಂಧ ಒಟ್ಟು 1,372 ಮತದಾರರು ಮತ ಚಲಾಯಿಸಿದ್ದಾರೆ. ಚುನಾವಣೆ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಏಪ್ರಿಲ್ 23ರ ವರೆಗೆ 6,438 ಇಡಿಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 11,341 ಹಿರಿಯ ನಾಗರಿಕ ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ 8,075 ಹಿರಿಯ ನಾಗರಿಕರಿಗೆ ನಮೂನೆ-12 ಡಿ ವಿತರಿಸಲಾಗಿದೆ. ನಮೂನೆ-12ಡಿ ಪಡೆದಿರುವವರ ಪೈಕಿ 350 ಮಂದಿ ನಾಗರಿಕರು ಮನೆಯಲ್ಲಿಯೇ ಮತದಾನ ಮಾಡಿದ್ದು, ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ.
ಇದನ್ನೂಓದಿ:ಗೀತಾ ಶಿವರಾಜ್ಕುಮಾರ್ ನನ್ನ ಸಹೋದರಿ ಇದ್ದಂತೆ, ವೈಯಕ್ತಿಕ ಟೀಕೆ ಮಾಡಲ್ಲ: ಈಶ್ವರಪ್ಪ - K S Eshwarappa