ಬೆಂಗಳೂರು: ಬೆಂಗಳೂರು ಎಂದಾಕ್ಷಣ ನೆನಪಾಗುವ ಹೆಸರೇ ಕೆಂಪೇಗೌಡರದ್ದು. ಸುಸಜ್ಜಿತ ನಗರ ನಿರ್ಮಾಣ ಮಾಡಿ ಇತಿಹಾಸವಾಗಿರುವ ಗೌಡರಿಗೆ ಗೌರವ ಸಲ್ಲಿಸುವ ಕೆಲಸ ಇಂದು ಸರ್ಕಾರ ಹಾಗೂ ಸಮಾಜದ ಮೂಲಕ ನಡೆಯುತ್ತಿದೆ. ನಾಡಿಗೆ ಕೆಂಪೇಗೌಡರು ನೀಡಿರುವ ಕೊಡುಗೆಯನ್ನು ಸ್ಮರಿಸಲು ಪ್ರಮುಖ ಸ್ಥಳಗಳಿಗೆ ಅವರ ಹೆಸರನ್ನು ಇಡಲಾಗಿದೆ. ಪ್ರತಿಮೆಗಳನ್ನು ಕೆತ್ತಲಾಗಿದೆ. ಸ್ಮಾರಕದ ಮೂಲಕ ಗೌಡರ ಜೀವನ ಚರಿತ್ರೆಯನ್ನು ಅನಾವರಣಗೊಳಿಸುವ ಕೆಲಸವೂ ನಡೆಯುತ್ತಿದೆ.
ಮೊದಲಿಗೆ ಕೆಂಪೇಗೌಡರ ಹೆಸರಿನ ಪ್ರಮುಖ ಸ್ಥಳ ಮೆಜೆಸ್ಟಿಕ್. ಹನುಮಂತಪುರ ಎಂದು ಕರೆಯಲ್ಪಡುತ್ತಿದ್ದ ಕೆಂಪೇಗೌಡ ವೃತ್ತದ ಪ್ರದೇಶವನ್ನು ನಂತರ ಮೆಜೆಸ್ಟಿಕ್ ಎಂದು ಕರೆಯಲಾಯಿತು. ಧರ್ಮಾಂಬುಧಿ ಕೆರೆಯ ಜಾಗದಲ್ಲೇ ತಲೆ ಎತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಬಸ್ ನಿಲ್ದಾಣ ಹಾಗೂ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ.
ನಮ್ಮ ಮೆಟ್ರೋದ ಕೇಂದ್ರ ನಿಲ್ದಾಣವೂ ಇಲ್ಲಿಯೇ ಇದ್ದು, ಇದಕ್ಕೂ ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂಬ ಹೆಸರಿಡಲಾಗಿದೆ. ಬೆಂಗಳೂರಿನ ರಸ್ತೆ ಸಾರಿಗೆ ಸಂಪರ್ಕದ ಕೇಂದ್ರಬಿಂದು ಈ ಸ್ಥಳವಾಗಿದ್ದು, ರಾಜ್ಯದ ಯಾವುದೇ ಮೂಲೆ ಮೂಲೆಯಿಂದ ಬೆಂಗಳೂರಿಗೆ ಬಂದರೂ ಅವರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರಬೇಕು. ರೈಲು, ಬಸ್ಗಳಲ್ಲಿ ಬರುವವರು ಇಲ್ಲಿಂದಲೇ ತಮ್ಮ ತಮ್ಮ ಪ್ರದೇಶಗಳಿಗೆ ತೆರಳಬೇಕು. ಹಾಗಾಗಿ, ಈ ಪ್ರದೇಶ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಒಂದಾಗಿದ್ದು, ಇದಕ್ಕೆ ಕೆಂಪೇಗೌಡರ ಹೆಸರನ್ನಿಡುವ ಮೂಲಕ ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿೂ ನಾಡಪ್ರಭುವಿನ ನಾಮಸ್ಮರಣೆ ಮಾಡುವ ಅರ್ಥಪೂರ್ಣ ಕೆಲಸವಾಗುತ್ತಿದೆ.
ಮತ್ತೊಂದು ಲ್ಯಾಂಡ್ ಮಾರ್ಕ್ನಂತಿರುವ ಸ್ಥಳವೆಂದರೆ ಅದು ಕೆಂಪೇಗೌಡ ಬಡಾವಣೆ. ಸುಮಾರು 4 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡಾವಣೆ ಇದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಬಡಾವಣೆ ಸಾಕಷ್ಟು ಸದ್ದು ಮಾಡುತ್ತಿದೆ. ಕೆಂಪೇಗೌಡರು ನಿರ್ಮಿಸಿರುವ ಕೆಂಪಾಂಬುಧಿ ಕೆರೆಯ ವ್ಯಾಪ್ತಿಯ ಬಡಾವಣೆಗೆ ಕೆಂಪೇಗೌಡ ನಗರ ಎನ್ನುವ ಹೆಸರಿಡಲಾಗಿದೆ. ಬಿಬಿಎಂಪಿ ವತಿಯಿಂದ ಈ ಪ್ರದೇಶದಲ್ಲಿ ನಿರ್ಮಿಸಿರುವ ಈಜುಕೊಳಕ್ಕೂ ಕೆಂಪೇಗೌಡನಗರ ಈಜುಕೊಳ ಎನ್ನುವ ಹೆಸರಿದೆ.
ಇಲ್ಲಿನ ಠಾಣೆಗೂ ಕೆಂಪೇಗೌಡನಗರ ಪೊಲೀಸ್ ಠಾಣೆ ಎನ್ನುವ ಹೆಸರಿಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಹಲವು ಸಣ್ಣಪುಟ್ಟ ರಸ್ತೆಗಳಲ್ಲಿ ಕೆಂಪೇಗೌಡ ರಸ್ತೆ ಎನ್ನುವುದು ಕಂಡುಬಂದರೂ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಬಿಬಿಎಂಪಿಯಿಂದ ಮೆಜೆಸ್ಟಿಕ್ ಸಂಪರ್ಕಿಸುವ ಮುಖ್ಯ ರಸ್ತೆಗೆ ಕೆಜಿ ರಸ್ತೆ ಎಂದು ಹೆಸರಿಡಲಾಗಿದೆ.
ಹೊಸೂರು, ಸರ್ಜಾಪುರ, ಜೆ.ಪಿ.ನಗರ, ಬನಶಂಕರಿ, ಬಸವನಗುಡಿ, ಕೋರಮಂಗಲದ ಕಡೆಯಿಂದ ಬಹುತೇಕ ಮೆಜೆಸ್ಟಿಕ್ಗೆ ಬರುವವರೆಲ್ಲ ಈ ರಸ್ತೆಯಿಂದಲೇ ಬರಬೇಕಿದೆ. ಅತ್ಯಂತ ವಾಹನ ದಟ್ಟಣೆ ಇರುವ ರಸ್ತೆಗೆ ಕೆಂಪೇಗೌಡರ ಹೆಸರಿದೆ.
ಇದೇ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಒಂದಕ್ಕೂ ಕೆಂಪೇಗೌಡ ಮಹಾರಾಜ ಶಾಪಿಂಗ್ ಕಂ ಪಾರ್ಕಿಂಗ್ ಕಾಂಪ್ಲೆಕ್ಸ್ ಎಂದು ಹೆಸರಿಡಲಾಗಿದೆ. ಒಕ್ಕಲಿಗರ ಸಂಘದಿಂದ ನಿರ್ಮಿಸಿರುವ ಮೆಡಿಕಲ್ ಕಾಲೇಜಿಗೂ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ ಎನ್ನುವ ಹೆಸರಿಡಲಾಗಿದೆ. ಇದು ನಗರದ ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿದೆ.
ಪ್ರತಿಮೆಗಳ ವಿಚಾರಕ್ಕೆ ಬರುವುದಾದರೆ, ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿಯೂ ಕೆಂಪೇಗೌಡರ ಪ್ರತಿಮೆಗಳು, ಕೆಂಪೇಗೌಡರ ಮಹಾದ್ವಾರಗಳು ಕಾಣಸಿಗುತ್ತವೆ. ಆದರೂ ಪ್ರಮುಖವಾಗಿ ಗುರುತಿಸುವುದು ಇತ್ತೀಚೆಗಷ್ಟೇ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಿರುವ ಕೆಂಪೇಗೌಡರ ಪ್ರತಿಮೆ. ಬಿಬಿಎಂಪಿ ಮುಂಭಾಗದಲ್ಲಿನ ಪ್ರತಿಮೆ ಹಾಗೂ ಕಿಮ್ಸ್ ಸರ್ಕಲ್ ನಲ್ಲಿನ ಪ್ರತಿಮೆಯಾಗಿದೆ. ಎಲ್ಲವೂ ಅಶ್ವಾರೂಢ ಪ್ರತಿಮೆಗಳೇ ಆಗಿವೆ.
ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡುವ ಕೆಲಸವೂ ನಡೆದಿದೆ. ದೇವನಹಳ್ಳಿಯಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಮೂರನೇ ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣದ ಜೊತೆಗೆ ಯುನೆಸ್ಕೋದ 2023 ಪ್ರಿಕ್ಸ್ ವರ್ಸೇಲ್ಸ್ ನ ಪ್ರತಿಷ್ಠಿತ ಪುರಸ್ಕಾರ ಪಡೆದು, ಟರ್ಮಿನಲ್-2ರ ಒಳಾಂಗಣ ವಿನ್ಯಾಸಕ್ಕೆ ವಿಶ್ವ ವಿಶೇಷ ಪ್ರಶಸ್ತಿಯೂ 2023ರಲ್ಲಿ ಲಭಿಸಿದೆ.
ಇದರೊಂದಿಗೆ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಇಲ್ಲಿ ಕೆಂಪೇಗೌಡರ 108 ಅಡಿಯ ಬೃಹತ್ ಕಂಚಿನ ಪುತ್ಥಳಿ ನಿರ್ಮಿಸಲಾಗಿದ್ದು, ಇದಕ್ಕೆ ಪ್ರಗತಿಯ ಪ್ರತಿಮೆ ಎನ್ನುವ ನಾಮಕರಣ ಮಾಡಲಾಗಿದೆ. ಪ್ರಧಾನಿ ಮೋದಿ ಈ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದರು. ಪ್ರತಿಮೆಯ ಪರಿಸರದಲ್ಲಿ 23 ಎಕರೆ ವಿಶಾಲವಾದ 'ಥೀಮ್ ಪಾರ್ಕ್' ಅಭಿವೃದ್ಧಿಪಡಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಕೆಂಪೇಗೌಡರ ಸಾಧನೆ ಪರಿಚಯಿಸುವ ಪರಿಕಲ್ಪನೆಯೊಂದಿಗೆ 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಕೆಂಪೇಗೌಡರ ಜೀವನಗಾಥೆಯ ಪಕ್ಷಿ ನೋಟ ಇದರಲ್ಲಿ ಇರಲಿದೆ.
ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿ ಕೆಂಪೇಗೌಡರ ಸ್ಮಾರಕ ಇದೆ. ಈ ಸ್ಮಾರಕ ನೋಡಲು ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬಳಿ ಇರುವ ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್ ಬಳಿ ಬಸ್ ಇಳಿದು ಆಟೋ ಮೂಲಕ 2 ಕಿ.ಮೀ ದೂರದಲ್ಲಿರುವ ಕೆಂಪಾಪುರ ಕೆಂಪೇಗೌಡರ ಸ್ಮಾರಕವಿರುವ ಸ್ಥಳಕ್ಕೆ ಬರಬಹುದು.
ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಬರುವ ರೈಲುಗಳ ಮೂಲಕವೂ ಪ್ರಯಾಣಿಸಿ ಕುಣಿಗಲ್ ಇಳಿದು ಅಲ್ಲಿಂದ ಬಸ್‌ಮೂಲಕ ಕೆಂಪಾಪುರಕ್ಕೆ ಬರಬಹುದು. ಇಲ್ಲಿಗೆ ಪ್ರವಾಸಿಗರು ಬರುವುದಕ್ಕಿಂತ ಇತಿಹಾಸದ ಅಧ್ಯಯನಕ್ಕೆ ಬರುವವರೇ ಹೆಚ್ಚಾಗಿದ್ದಾರೆ ಎನ್ನುವ ಮಾಹಿತಿ ಇದೆ.