ಮೈಸೂರು: ಅಕ್ಟೋಬರ್ 3ರ ಗುರುವಾರ ಬೆಳಗ್ಗೆ 9.15ರಿಂದ 9.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ನಾಡಹಬ್ಬ ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ಸಿಗಲಿದೆ. ದಸರಾದ ಕಾರ್ಯಕ್ರಮಗಳು 11 ವಿವಿಧ ವೇದಿಕೆಗಳಲ್ಲಿ ನಡೆಯಲಿವೆ.
ಇಂದು ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಈ ಬಗ್ಗೆ ಮಾಹಿತಿ ನೀಡಿದರು. ಅಕ್ಟೋಬರ್ 3ರಂದೇ ಸಂಜೆ ಅರಮನೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು.
ಏರ್ ಶೋ ಅನುಮಾನ: ದಸರಾದಲ್ಲಿ ಈ ಬಾರಿ ಏರ್ ಶೋ ನಡೆಯುವುದು ಅನುಮಾನ, ಈ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಯಾಗಿಲ್ಲ. ಅದರೆ, ಕೆಲವು ಕಾರ್ಯಕ್ರಮಗಳು ನಡೆಯಲಿದೆ. ಸೆಪ್ಟೆಂಬರ್ 26 ರಿಂದ ದಸರಾ ಗೋಲ್ಡ್ ಕಾರ್ಡ್ ಮಾರಾಟ ಮಾಡಲಾಗುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿ ಯುವ ದಸರಾಗೆ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವುದರಿಂದ ಮಹಾರಾಜ ಕಾಲೇಜು ಆವರಣದಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ನಗರದ ಹೊರ ವಲಯದಲ್ಲಿ ಯುವ ದಸರಾ ನಡೆಯಲಿದೆ. ಅಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಬಹುಮತ ಪಡೆದು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಸಿಎಂ ಸ್ಥಾನ ಖಾಲಿಯಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ನಾವೆಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಇದೇ ವೇಳೆ ಮಹದೇವಪ್ಪ ಹೇಳಿಕೆ ನೀಡಿದರು.
ಇದನ್ನೂ ಓದಿ: ಮೈಸೂರು: ದಸರಾಗೆ ರಾಜಮಾತೆಯನ್ನು ಆಹ್ವಾನಿಸಿದ ಜಿಲ್ಲಾಡಳಿತ - Dasara invitation to Rajamata
ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್, ಬಿಜೆಪಿ ನಾಯಕರು ಆಗ್ರಹ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ಆಗಿವೆ. ಎಫ್ಐಆರ್ ಆದಾಕ್ಷಣ ರಾಜೀನಾಮೆ ಕೊಡಬೇಕು ಎಂದೇನು ಇಲ್ಲ. ಜೈಲಿಗೆ ಹೋದ ತಕ್ಷಣ ರಾಜೀನಾಮೆ ನೀಡಿ ಎಂದು ಕೋರ್ಟ್ ಹೇಳಿದೆಯಾ? ಎಂದು ಪ್ರಶ್ನೆ ಮಾಡಿದ ಸಚಿವರು, ಭಾರತದ ಚುನಾವಣಾ ಇತಿಹಾಸದಲ್ಲಿ ಬಿಜೆಪಿಯವರ ಚುನಾವಣಾ ಬಾಂಡ್ ದೊಡ್ಡ ಹಗರಣ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಕುಗ್ಗಿಲ್ಲ ಎಂದ ಹೆಚ್.ಸಿ.ಮಹದೇವಪ್ಪ, ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ಸಾಗಿದೆ ಎಂಬುದೇ ಬೇಸರದ ಸಂಗತಿ. ಬಿಜೆಪಿಯಲ್ಲಿ ಸಿಎಂ ಆಗಲು ಮೂರು ಸಾವಿರ ಕೋಟಿ ರೂ. ಕೊಡಬೇಕು ಎಂದು ಯತ್ನಾಳ್ ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೈಸೂರು ಪೇಟಕ್ಕಿದೆ ರಾಜ ಪರಂಪರೆಯ ಇತಿಹಾಸ; ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ - Mysuru peta