ಮೈಸೂರು: ಎರಡು ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ 'ಅಶ್ವತ್ಥಾಮ' ಆನೆ ವಿದ್ಯುತ್ ಸ್ವರ್ಶದಿಂದ ಸಾವನ್ನಪ್ಪಿರುವ ಘಟನೆ ಇಂದು ಜಿಲ್ಲೆಯ ಭೀಮನಕಟ್ಟೆ ಆನೆ ಶಿಬಿರದ ಬಳಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ 38 ವರ್ಷದ ಅಶ್ವತ್ಥಾಮನನ್ನು ಸಾಕಾನೆ ಕಟ್ಟಿಹಾಕುವ ಜಾಗದಲ್ಲಿ ಕಟ್ಟಲಾಗಿತ್ತು. ಮಂಗಳವಾರ (ಜೂನ್ 11)ರ ಬೆಳಗ್ಗೆ 5:30ಕ್ಕೆ ಸಿಬ್ಬಂದಿ ಎಬ್ಬಿಸಲು ಹೋದಾಗ ಆನೆ ಮೃತಪಟ್ಟಿರುವುದು ಗೊತ್ತಾಗಿದೆ. ಕೂಲಂಕಷವಾಗಿ ಪರಿಶೀಲಿಸಿ ನೋಡಿದಾಗ ಆನೆಯ ಬೆನ್ನಿನ ಮೇಲೆ ಸೋಲಾರ ತಂತಿ ಬಿದ್ದು, ಶಾಕ್ ತಗುಲಿರುವುದರಿಂದ ಸಾವನ್ನಪ್ಪಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು. 4 ವರ್ಷಗಳ ಕಾಲ ಪಳಗಿಸಿದ ಬಳಿಕ 2021 ಹಾಗೂ 2022ರಲ್ಲಿ ಮೈಸೂರು ದಸರಾದ ಗಜ ಪಯಣದಲ್ಲಿ ಹೆಜ್ಜೆ ಹಾಕಿತ್ತು. ಶಾಂತ ಸ್ವಭಾವ ಹಾಗೂ ಗಾಂಭೀರ್ಯಕ್ಕೆ ಅಶ್ವತ್ಥಾಮ ಹೆಸರುವಾಸಿಯಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಆನೆಯ ಮಾದರಿ ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಶ್ವತ್ಥಾಮ ಸಾವಿಗೆ ಸಿಎಂ ಸಂತಾಪ; ಮೈಸೂರು ದಸರಾದಲ್ಲಿ ಪಾಲ್ಗೊಂಡು ಲಕ್ಷಾಂತರ ಜನರ ಮೆಚ್ಚುಗೆ ಗಳಿಸಿದ್ದ ಆನೆ ಅಶ್ವತ್ಥಾಮನ ಸಾವು ನೋವುಂಟುಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ತನ್ನ ಶಾಂತ ಸ್ವಭಾವ ಮತ್ತು ಗಾಂಭೀರ್ಯದಿಂದಾಗಿ ಬಹುಬೇಗನೇ ವಿಶ್ವವಿಖ್ಯಾತ ದಸರಾದ ಭಾಗವಾಗಿ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ. ಅಶ್ವತ್ಥಾಮನ ನೆನಪು ನಮ್ಮ ಮನದಲ್ಲಿ ಶಾಶ್ವತವಾಗಿರಲಿದೆ ಎಂದು ಸ್ಮರಿಸಿದ್ದಾರೆ.
ತನಿಖೆ ನಡೆಸಿ, ವರದಿ ನೀಡಲು ಸಚಿವ ಖಂಡ್ರೆ ಸೂಚನೆ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಅಶ್ವತ್ಥಾಮ (38) ಆನೆಯ ನಿಧನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ದಸರಾ ಮಹೋತ್ಸವದಲ್ಲಿ 2 ಬಾರಿ ಭಾಗಿಯಾಗಿದ್ದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಭೀಮನಕಟ್ಟೆ ಶಿಬಿರದಲ್ಲಿದ್ದ ಅಶ್ವತ್ಥಾಮ ಸೌರ ವಿದ್ಯುತ್ ಬೇಲಿ ಬಿದ್ದು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಈ ಆಕಸ್ಮಿಕ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಕಾಡಾನೆ ಸಾವು: ಉನ್ನತ ಮಟ್ಟದ ಸಮಿತಿಯಿಂದ ತನಿಖೆ