ಬೆಂಗಳೂರು: ಇತಿಹಾಸ ಪ್ರಸಿದ್ಧ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ಮೇಲೆ ಹಾಕಿದ್ದ ಸೀರೆಗಳನ್ನು ಚಾಮುಂಡೇಶ್ವರಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮಾರಾಟ ಮಾಡಿದ್ದರೆ ಅದು "ಕ್ಷಮಿಸಲಾರದ ಕೃತ್ಯ" ಎಂದಿರುವ ಹೈಕೋರ್ಟ್, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ತನಿಖೆಗೆ ತಡೆಯಾಜ್ಞೆ ವಿಧಿಸಿ ಆದೇಶಿಸಿತು.
ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸ್ನೇಹಮಯಿ ಕೃಷ್ಣ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದು, ಪೊಲೀಸರ ಸಮ್ಮುಖದಲ್ಲಿ ರೂಪಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಸಂಪೂರ್ಣ ಅಸಂಭವನೀಯ. ಈ ಪ್ರಕರಣದ ವಿಚಾರಣೆ ಆಗದಿದ್ದರೂ ರೂಪಾ ವಿರುದ್ಧ ದಾಖಲಿಸಿರುವ ಪ್ರಕರಣ ಸರಿಯಾಗಿದ್ದರೆ ತನಿಖೆ ಅಗತ್ಯ. ರೂಪಾ ಅವರು ದೇವರ ಮೇಲೆ ಹಾಕಿರುವ ಸೀರೆಗಳನ್ನು ಮಾರಾಟ ಮಾಡಿದ್ದರೆ ಅದು ಕ್ಷಮಿಸಲಾರದ ಅಪರಾಧ. ಹೀಗಾಗಿ, ಸ್ನೇಹಮಯಿ ಕೃಷ್ಣ ವಿರುದ್ಧದ ತನಿಖೆಗೆ ತಡೆ ವಿಧಿಸಲಾಗಿದೆ ಎಂದು ಪೀಠ ತಿಳಿಸಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಡಿಸೆಂಬರ್ 12ರಂದು ರೂಪಾ ಅವರನ್ನು ಸ್ನೇಹಮಯಿ ಕೃಷ್ಣ ಏರುಧ್ವನಿಯಲ್ಲಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಎರಡು ದಿನಗಳ ಬಳಿಕ ಪ್ರಕರಣ ದಾಖಲಾಗಿದೆ. ಚಾಮುಂಡೇಶ್ವರಿಗೆ ನೀಡಲಾದ ಸೀರೆಗಳನ್ನು ಮಾರಾಟ ಮಾಡಲಾಗಿದೆ ಎಂದು ಕೃಷ್ಣ ಆರೋಪಿಸಿದ್ದರು. ಜೊತೆಗೆ, ಸ್ನೇಹಮಯಿ ಕೃಷ್ಣ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದು, ಪೊಲೀಸರ ಸಮ್ಮುಖದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ರೂಪಾ ದೂರು ನೀಡಿದ್ದಾರೆ ಎಂದರು.
ಇದಕ್ಕೆ ಪೀಠ, ಚಾಮುಂಡೇಶ್ವರಿ ದೇವಿಗೆ ಹಾಕಿರುವ ಸೀರೆಯನ್ನು ಬಿಡುವುದಿಲ್ಲ ಎಂದರೆ ಹೇಗೆ? ಎಲ್ಲವೂ ಉದ್ಯಮವಾಗಿದೆ. ಅವರು ಅಲ್ಲಿ ಸರ್ಕಾರಿ ಅಧಿಕಾರಿ, ಕಾರ್ಯದರ್ಶಿ ಹೀಗೆ ಮಾಡುವುದೇ? ಎಂದು ಮೌಖಿಕವಾಗಿ ಪ್ರಶ್ನಿಸಿತು.
ಪ್ರಕರಣದ ಹಿನ್ನೆಲೆ: 2024ರ ಡಿಸೆಂಬರ್ 12ರಂದು ಸ್ನೇಹಮಯಿ ಕೃಷ್ಣ ಅವರು ಏಕಾಏಕಿ ತನ್ನ ಕೊಠಡಿಗೆ ಅನುಮತಿ ಇಲ್ಲದೇ ನುಗ್ಗಿ ಬಂದಿದ್ದರು. ಈ ಕುರಿತು ಪ್ರಶ್ನಿಸಿದ್ದೆ. ಇದಕ್ಕೆ ಕೃಷ್ಣ ಅವರು ಏರು ಧ್ವನಿಯಲ್ಲಿ ನಿಮಗೆ ಪಾಠ ಕಲಿಸದೇ ಬಿಡುವುದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ನಾನು ದೂರು ನೀಡಿದ್ದೇನೆ. ನಿಮಗೆ ತೊಂದರೆ ಕೊಡುವುದು ದೊಡ್ಡ ವಿಚಾರವಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಆಗ ಕೃಷ್ಣಗೆ ತಾವು ದೂರು ನೀಡಿದರೆ ತಾನು ಮಾಹಿತಿಯೊಂದಿಗೆ ಬರುತ್ತೇನೆ ಎಂದು ಹೇಳಿದ್ದನ್ನು ಕೇಳಿಸಿಕೊಳ್ಳದೇ ಕಚೇರಿಯಿಂದ ಎದ್ದು ಬಾ ಎಂದು ಜೋರಾಗಿ ಕೂಗಾಡುತ್ತಾ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ, ಯಾವುದೇ ಸಾಕ್ಷಿ ಇಲ್ಲದೇ ದೇವಸ್ಥಾನಕ್ಕೆ ಸೇರಿದ ಸೀರೆಗಳನ್ನು ಕದ್ದು ತೆಗೆದುಕೊಂಡಿರುತ್ತೇನೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಿದ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೂಪಾ ದೂರು ನೀಡಿದ್ದರು.
ಇದರ ಅನ್ವಯ ಸ್ನೇಹಮಯಿ ಕೃಷ್ಣ ವಿರುದ್ಧ ಕೃಷ್ಣರಾಜ ಠಾಣೆಯಲ್ಲಿ ಭಾರತೀಯ ನ್ಯಾಯಸಂಹಿತೆ ಸೆಕ್ಷನ್ 132, 351 ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಸಿಎಂ ವಿರುದ್ಧ ಮತ್ತೊಂದು ದೂರು ದಾಖಲಿಸಲು ಲೋಕಾಯುಕ್ತರಿಗೆ ಸ್ನೇಹಮಯಿ ಕೃಷ್ಣ ಮನವಿ