ಹಾವೇರಿ/ವಿಜಯನಗರ : ರಾಜ್ಯದ ಜನರು ಬಹಳ ಕುತೂಹಲದಿಂದ ಕಾಯುತ್ತಿದ್ದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಮೈಲಾರ ಲಿಂಗೇಶ್ವರ ಕಾರ್ಣಿಕ ಭವಿಷ್ಯವಾಣಿ ಹೊರಬಿದ್ದಿದೆ. "ಸಂಪಾಯಿತಲೇ ಪರಾಕ್" ಎಂಬ ಎರಡು ಪದಗಳನ್ನು ಮಾತ್ರ ಗೊರವಯ್ಯ ಹೇಳಿದ್ದು, ಈ ವರ್ಷ ಮಳೆ-ಬೆಳೆ ಸಮೃದ್ಧವಾಗಲಿದೆ ಎಂದು ದೈವ ವಾಣಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ಡಂಕನಮರಡಿಯಲ್ಲಿ 15 ಅಡಿ ಎತ್ತರದ ಬಿಲ್ಲನೇರಿ ರಾಮಪ್ಪ ಗೋರವಯ್ಯ ಇಂದು ಕಾರ್ಣಿಕ ಭವಿಷ್ಯ ವಾಣಿ ನುಡಿದರು. ಕಾರ್ಣಿಕ ನುಡಿಯುವ ಮುನ್ನ ಗೊರವಯ್ಯ ರಾಮಪ್ಪ 9 ದಿನಗಳ ಕಾಲ ಉಪವಾಸ ಮಾಡುತ್ತಾರೆ. ಈ ಹಿನ್ನೆಲೆ ಮೈಲಾರ ಲಿಂಗದ ಕಾರ್ಣಿಕ ರಾಜ್ಯದಲ್ಲಿ ಗಮನ ಸೆಳೆದಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಿಂದ ನಡೆದ ಈ ಕಾರ್ಣಿಕೋತ್ಸವದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನರು ಹಾಗೂ ಅಂತಾರಾಜ್ಯ ಭಕ್ತರು ಸಹ ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ಮೈಲಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಕಣ್ಣು ಹಾಯಿಸಿದೆಲ್ಲೆಡೆ ಭಕ್ತರು ಕಾಣಿಸಿದ್ದು ವಿಶೇಷವಾಗಿತ್ತು. ಬರಗಾಲದಿಂದ ಕಂಗೆಟ್ಟಿದ್ದ ನಾಡಿನ ಜನತೆಗೆ ಮೈಲಾರಲಿಂಗದ ಕಾರ್ಣಿಕ ಸಿಹಿ ಸುದ್ದಿ ನೀಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ. ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಸಿಂಚನ ಮೂಡಿಸುವ ಭರವಸೆ ಸಿಕ್ಕಂತಾಗಿದೆ.
ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತರಾದ ಶ್ರೀಗುರು ವೆಂಕಪ್ಪಯ್ಯ ಒಡೆಯರ್, ಕಾಗಿನೆಲೆ ಪೂಜ್ಯರಾದ ನಿರಂಜನನಂದ ಸ್ವಾಮಿಗಳು, ಚನ್ನಬಸವೇಶ್ವರ ಸ್ವಾಮಿಗಳು, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಐಜಿಪಿ ಬಿ.ಎಸ್.ಲೋಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಆಯುಕ್ತ ಹೆಚ್.ಗಂಗಾಧರಪ್ಪ, ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ ಕೃಷ್ಣಪ್ಪ, ಜೆಸ್ಕಾಂನ ಕಾರ್ಯನಿರ್ವಾಹಕ ಅಧಿಕಾರಿ ಹುಸೇನ್‌ಸಾಬ್ ಉಪಸ್ಥಿತರಿದರು.
ಫೆ.27ರ ಕಾರ್ಯಕ್ರಮ : ಫೆ.27ರಂದು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುತ್ತದೆ. ಸಂಜೆ 4.30ಕ್ಕೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಗುರು ಪಾರಂಪರ್ಯ ಶ್ರೀ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಕಂಚಿವೀರರಿಂದ ಪವಾಡ ಹಾಗೂ ಗೊರವಯ್ಯರವರಿಂದ ಸರಪಳಿ ಪವಾಡ ನಡೆಯಲಿದೆ.
ಜಿಗಣೆಹಳ್ಳಿ ಮೈಲಾರ ಕಾರ್ಣಿಕ : ಮತ್ತೊಂದೆಡೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಜಿಗಣೆಹಳ್ಳಿ ಮೈಲಾರ ಲಿಂಗೇಶ್ವರ ಸ್ವಾಮಿ ಕೂಡ ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಈ ವರ್ಷ ಮಳೆ ಬೆಳೆ ಸಮೃದ್ಧವಾಗಿ ಆಗುತ್ತದೆ. ಮತ್ತೆ ಕಮಲ ಅರಳುತ್ತದೆ ಎಂದು ಈ ವಾಣಿಯನ್ನು ವಿಶ್ಲೇಷಣೆ ಮಾಡಲಾಗಿದೆ. ಜೊತೆಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮತ್ತೆ ಕಮಲ ಅರಳುತ್ತದೆ ಎಂದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲೆಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಹುಟ್ಟಿದ ಕಮಲ ಆಕಾಶ ಮೆಟ್ಟಿತು, ಮಳೆ ಬೆಳೆ ಸಂಪಾಯಿತಲೇ ಪರಾಕ್.. ಜಿಗಣೆಹಳ್ಳಿ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ