ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಇಂದು ಮೈಸೂರು ಮುಡಾ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಹಗರಣಗಳ ಆರೋಪದ ಬಗ್ಗೆ ಅಧಿಕಾರಿಗಳಿಂದ ಕೆಲವು ಮಾಹಿತಿ ಪಡೆದ ನಂತರ ಮಾಧ್ಯಮಾಗಳ ಜೊತೆ ಮಾತನಾಡಿದರು. ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ವೆಂಕಟಾಚಲಪತಿ ಹಾಗೂ ಪ್ರಭುಲಿಂಗ ಕೌಲಿಕಟ್ಟಿ ಎಂಬ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ಈ ತಂಡ ನಾಲ್ಕು ವಾರಗಳಲ್ಲಿ ತನಿಖೆ ನಡೆಸಿ ವರದಿ ನೀಡಲಿದೆ. ಆರೋಪ ಕೇಳಿಬಂದ ಹಿನ್ನೆಲೆ ತಕ್ಷಣದಿಂದ ಮುಡಾ ಆಯುಕ್ತ ದಿನೇಶ್ ಕುಮಾರ್ ಹಾಗೂ ಕಾರ್ಯದರ್ಶಿ ಜೊತೆಗೆ ಎಇಇ ಕೂಡ ವರ್ಗಾವಣೆ ಮಾಡಲಾಗುವುದು. ಮುಂದಿನ ಒಂದು ತಿಂಗಳು ಮುಡಾದಲ್ಲಿ ಯಾವುದೇ ಸೈಟ್ ಹಂಚಿಕೆ ಹಾಗೂ ಸಭೆ ಮಾಡುವಂತಿಲ್ಲ. ಹಿಂದೆ ಹಂಚಿಕೆ ಆಗಿರುವ ಎಲ್ಲಾ ಸೈಟ್ಗಳನ್ನ ತಡೆ ಹಿಡಿಯಲಾಗಿದೆ ಎಂದು ಸಚಿವರು ತಿಳಿಸಿದರು.
ವಿಶ್ವನಾಥ್ಗೆ ತಿರುಗೇಟು: ಮುಡಾ ದಾಖಲಾತಿಗಳನ್ನ ಪೆನ್ಡ್ರೈವ್ ಮೂಲಕ ನೀಡುವಂತೆ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕೋರಿಕೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮಲ್ಲಿ ಪೆನ್ ಡ್ರೈವ್ ಸಂಸ್ಕೃತಿಯಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ವಿಶ್ವನಾಥ್ ಮುಡಾ ಹಗರಣಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನನ್ನ ಬಳಿ ಸೈಟ್ ಕೊಡಿಸುವಂತೆ ಬಂದಿದ್ದರು. ಅದನ್ನು ನೆನಪು ಮಾಡಿಕೊಳ್ಳಲಿ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಮುಡಾದಲ್ಲಿ 2,500 ಕೋಟಿ ಹಗರಣ ಆಗಿದೆ ಎಂದು ಆರೋಪ ಮಾಡುವ ಕೌಟಿಲ್ಲ ರಘು ಆಸ್ಪತ್ರೆ ಕಟ್ಟುತ್ತೇನೆಂದು ಒಂದು ಎಕರೆ ಜಮೀನು ಪಡೆದು ಸ್ಕೂಲ್ ಕಟ್ಟಿದ್ದಾರೆ ಎಂದು ತಿರುಗೇಟು ನೀಡಿದರು. ಜೊತೆಗೆ ಮುಖ್ಯಮಂತ್ರಿಗಳ ಪತ್ನಿ ಮುಡಾದಲ್ಲಿ ಬದಲಿ ನಿವೇಶನ ಪಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ರೀತಿ ಸೈಟ್ ಪಡೆದಿದ್ದಾರೆ. ಸರಿ ಇಲ್ಲ ಎಂದರೆ ಅದನ್ನು ಸಹ ವಾಪಸ್ ಪಡೆಯಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.
ಸಿಎಂ ಸ್ಥಾನ ಖಾಲಿ ಇಲ್ಲ: ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಡಿಸಿಎಂ ಸ್ಥಾನ ಕೂಡ ಖಾಲಿ ಇಲ್ಲ. ಎಲ್ಲವನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರೋವುದನ್ನ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಡಾ.ಯತೀಂದ್ರ ಆ್ಯಂಡ್ ಟೀಂ ಸಹಕಾರದಿಂದ ಮುಡಾದಲ್ಲಿ 5 ಸಾವಿರ ಕೋಟಿ ರೂ. ಅವ್ಯವಹಾರ: ಹೆಚ್. ವಿಶ್ವನಾಥ್ - H Vishwanath
ಇದನ್ನೂ ಓದಿ: ಸಿಗರೇಟ್ ಹೆಚ್ಚು ಸೇದಿದರೆ ಆಯಸ್ಸು ಕಡಿಮೆಯಾಗುತ್ತದೆಂದು ತಿಳಿದು ಸಿಗರೇಟ್ ಬಿಟ್ಟೆ: ಸಿಎಂ ಸಿದ್ದರಾಮಯ್ಯ - CM SIDDARAMAIAH