ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ(ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ, ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ವಾಪಾಸ್ ನೀಡಿದ ಬೆನ್ನಲ್ಲೇ, ನಿವೇಶನಗಳ ಕ್ರಯಪತ್ರವನ್ನು ರದ್ದುಗೊಳಿಸುವಂತೆ ಮುಡಾ ಆಯುಕ್ತ ರಘುನಂದನ್, ಸಬ್ರಿಜಿಸ್ಟರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮುಡಾದಲ್ಲಿ ಪಾರ್ವತಿ 50:50ರಂತೆ ಪಡೆದ ನಿವೇಶನಗಳನ್ನು ಹಿಂದಿರುಗಿಸಿ, ಸೋಮವಾರ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಮಂಗಳವಾರ ಬೆಳಗ್ಗೆ ಅವರ ಪುತ್ರ ಹಾಗು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ನೀಡಿದ್ದರು.
ಈ ಕುರಿತು ಪ್ರಾಧಿಕಾರದ ಆಯುಕ್ತ ರಘುನಂದನ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, "ಯಾರೇ ನಿವೇಶನವನ್ನು ವಾಪಸ್ ನೀಡಿದರೂ ಹಿಂಪಡೆಯುತ್ತೇವೆ. ಅದರ ಆಧಾರದಲ್ಲಿ ಇಂದು ಪಾರ್ವತಿಯವರು ಮುಡಾಗೆ ವಾಪಸ್ ನೀಡಿರುವ ನಿವೇಶನಗಳನ್ನು ಹಿಂಪಡೆದು ಅವರ 14 ನಿವೇಶನಗಳ ಕ್ರಯಪತ್ರವನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಈ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಲಾಗುವುದು ಹಾಗೂ ಮುಂದಿನ ಕಾನೂನು ಪ್ರಕ್ರಿಯೆಯನ್ನು ಕಾನೂನು ತಜ್ಞರ ಜೊತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು" ಎಂದರು.
ಇದನ್ನೂ ಓದಿ: ಮುಡಾ ಕೆಸರೆ ಜಮೀನು ಮಹಜರು: ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದೇನು? - Muda Plots Inspection